ಚಂದನವನ (sandalwood)

KK DWARKI ARTICLES

Go down

KK DWARKI ARTICLES

Post by dragon warrior on Tue Oct 09, 2012 10:54 am

ಸಮಸ್ಯೆಗಳ ಸರಮಾಲೆ

ಭಾರ್ಗವ ನಿರ್ದೇಶನದಲ್ಲಿ ನಾನು ಸಿನಿಮಾಗಳನ್ನು ತೆಗೆಯತೊಡಗಿದ ಕಾಲದಲ್ಲಿ ಅವನು ಮದ್ರಾಸ್‌ನಲ್ಲಿದ್ದ. ನಾನು ಬೆಂಗಳೂರಿನಲ್ಲಿದ್ದೆ. ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೊ ಇದ್ದದ್ದು ಮದ್ರಾಸ್‌ನಲ್ಲಿ. ರೆಕಾರ್ಡಿಂಗ್, ರಿರೆಕಾರ್ಡಿಂಗ್, ಮಿಕ್ಸಿಂಗ್ ಕೆಲಸ ಮಾಡುತ್ತಿದ್ದದ್ದು ಅಲ್ಲಿಯೇ. ನನ್ನ ಯಾವುದೇ ಚಿತ್ರಕ್ಕೆ ಹೆಚ್ಚೆಂದರೆ ಎರಡು ದಿನ ರಿರೆಕಾರ್ಡಿಂಗ್ ಮಾಡುತ್ತಿದ್ದೆನಷ್ಟೆ.

ಮಿಕ್ಸಿಂಗ್ ಮಾಡಲೂ ಎರಡೇ ದಿನ ಸಾಕಾಗುತ್ತಿತ್ತು. ಚಿತ್ರೀಕರಣ ಪೂರ್ಣಗೊಂಡ ಏಳನೇ ದಿನಕ್ಕೆ ಮೊದಲ ಪ್ರತಿ ಸಿದ್ಧವಾಗುತ್ತಿತ್ತು. ಕೆಲಸದಲ್ಲಿ ನಾನು ಅಷ್ಟು ಪಕ್ಕಾ ರೀತಿಯಲ್ಲಿ ಪಳಗಿದ್ದೆನೋ ಏನೋ?

ಆಗ ಶಿವಾಜಿ ಎಂಬ ಪ್ರೊಡಕ್ಷನ್ ಮ್ಯಾನೇಜರ್ ಒಬ್ಬನಿದ್ದ. ಅವನು ಹಳೆಯ ಮ್ಯಾನೇಜರ್. ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನೂ ಮಾಡುತ್ತಿದ್ದ. ನನಗೆ ಆಪ್ತ. ಅವನನ್ನೂ ಸಿಂಗಪೂರ್‌ಗೆ ಕರೆದುಕೊಂಡು ಹೋಗಿದ್ದೆ. ನನ್ನ ಪ್ರತಿ ಸಿನಿಮಾದ ಮಿಕ್ಸಿಂಗ್ ನಡೆಯುವ ಸಂದರ್ಭದಲ್ಲಿ ಅವನು ಮನೆಯಿಂದ ಬಿರಿಯಾನಿ ಮಾಡಿಸಿಕೊಂಡು ತರುತ್ತಿದ್ದ. ರಾಮನಾಥ್ ಎಂಬ ಎಂಜಿನಿಯರ್, ಪಾಂಡು ಎಂಬ ಸಹಾಯಕ ಎಂಜಿನಿಯರ್ ಕೂಡ ಅಲ್ಲಿದ್ದರು.

ಅವರೆಲ್ಲಾ ನನ್ನ ಕುಟುಂಬದ ಸದಸ್ಯರಂತಾಗಿದ್ದರು. ರಾಜ್‌ಕುಮಾರ್ ಸಿನಿಮಾಗಳ ಬಹುತೇಕ ಹಾಡುಗಳು ಆಗ ರೆಕಾರ್ಡ್ ಆಗುತ್ತಿದ್ದುದು ಪ್ರಸಾದ್ ಸ್ಟುಡಿಯೋದಲ್ಲಿಯೇ. ಅಲ್ಲಿ ಚಿ.ಉದಯಶಂಕರ್ ನನಗೆ ಬೇಕಾದಷ್ಟು ಕಥೆಗಳನ್ನು ಹೇಳಿದ್ದಾನೆ. ಹಾಗಾಗಿ ಅದಕ್ಕೂ ನನಗೂ ಬಿಡಿಸಲಾಗದ ನಂಟು.

ನೆಗೆಟಿವ್‌ಗಳನ್ನು ಹಾಕಿ, ಕಲರ್‌ಗೆ ಪ್ರಿಂಟ್ ಪರಿವರ್ತಿಸುವ `ಅನಲೈಸರ್` ಬಳಸಲು ಆ ಕಾಲದಲ್ಲಿ ಬಹಳ ಮುಂಚೆಯೇ ಬುಕ್ ಮಾಡಬೇಕಿತ್ತು. ನಾನು ಎಷ್ಟೋ ಸಂದರ್ಭಗಳಲ್ಲಿ ಸಿನಿಮಾ ಮುಹೂರ್ತದ ದಿನವೇ `ಅನಲೈಸರ್` ಬುಕ್ ಮಾಡುತ್ತಿದ್ದೆ. ಮೂರು ತಿಂಗಳು ಮುಂಚಿತವಾಗಿ ನಾನು ಬುಕ್ ಮಾಡಿರುತ್ತಿದ್ದುದನ್ನು ಕಂಡು ಅನೇಕರು ಚಕಿತರಾಗುತ್ತಿದ್ದರು.

ತಮ್ಮ ಚಿತ್ರಗಳಿಗೆ ನಾನು ಬುಕ್ ಮಾಡಿದ ದಿನ ಅದನ್ನು ಬಳಸಬೇಕಾದಾಗ ನನ್ನ ಅನುಮತಿ ಕೇಳುತ್ತಿದ್ದರು. ಪ್ರಸಾದ್ ಸ್ಟುಡಿಯೋದ ರಮೇಶ್ ಪ್ರಸಾದ್ ನನಗೆ ಪರಮಾಪ್ತನಾಗಿದ್ದ. ಅವನು ನಮ್ಮ ಮನೆಗೆ ಪದೇಪದೇ ಬರುತ್ತಿದ್ದ. ಅವನಲ್ಲದೆ ರೋಜಾ ಮೂವೀಸ್‌ನ ಕುಮಾರ್ ಕೂಡ ಆಪ್ತರ ಪಟ್ಟಿಗೆ ಸೇರಿದವನು. ನಾವೆಲ್ಲಾ ನಿರಂತರವಾಗಿ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಿದ್ದೆವು.
*
`ಪೆದ್ದ ಗೆದ್ದ` ಚಿತ್ರದವರೆಗೆ ನನ್ನದೇ ಜಮಾನ. ಆಮೇಲೆ ನಾನು `ರಾಮಾಯಣಮುಲೋ ಪಿಡಕಲ ವೇಟ` ಎಂಬ ಸಿನಿಮಾವನ್ನು ಮದ್ರಾಸ್‌ನಲ್ಲಿ ನೋಡಿದೆ. ರಾಜಾಚಂದ್ರ ನಿರ್ದೇಶಿಸಿದ ಚಿತ್ರವದು. ಅವನನ್ನು ಕರೆದುಕೊಂಡು ಬಂದು, `ಮನೆ ಮನೆ ಕಥೆ` ಮಾಡಿಸಿದೆ.
ನಾನು ಜಯಚಿತ್ರಾ ಜೊತೆ ನಟಿಸಿದಾಗಿನಿಂದಲೂ ವಿಷ್ಣು ತನ್ನ ಒಂದು ಬಯಕೆಯನ್ನು ಹೇಳಿಕೊಳ್ಳುತ್ತಲೇ ಇದ್ದ. ಅವನಿಗೂ ಆ ನಟಿಯ ಜೊತೆ ಅಭಿನಯಿಸುವ ಆಸೆ. ಅವನ ಆಸೆ ಈಡೇರಿಸಲೆಂದೇ ಜಯಚಿತ್ರಾ ಅವರನ್ನು ಒಪ್ಪಿಸಿ `ಮನೆ ಮನೆ ಕಥೆ` ಚಿತ್ರಕ್ಕೆ ಕರೆತಂದೆ. `ರಾಮಾಯಣಮುಲೋ ಪಿಡಕಲ ವೇಟ` ಚಿತ್ರ `ಮನೆ ಮನೆ ಕಥೆ`ಯಾಗಿ ತೆರೆಗೆ ಬಂತು.

ಒಂದು ಕಡೆ ನನ್ನ ಬೆಳವಣಿಗೆ. ವಿಷ್ಣು ಹಾಗೂ ನನ್ನ ಕಾಂಬಿನೇಷನ್ ಗೆಲುವು. ಇವನ್ನೆಲ್ಲಾ ನಮ್ಮ ಚಿತ್ರೋದ್ಯಮದವರೇ ಸಹಿಸಲಿಲ್ಲ. ಅನೇಕರು ಅಸೂಯೆ ಪಡಲಾರಂಭಿಸಿದರು.

`ಗುರು ಶಿಷ್ಯರು` ಚಿತ್ರೀಕರಣದ ಸಂದರ್ಭದಲ್ಲಿ ಕಂಠೀರವ ಸ್ಟುಡಿಯೋಗೆ ಬಂದು ಕೆಲವರು ಏನೇನೋ ಕೂಗಿ, ಸಹನೆ ಪರೀಕ್ಷೆ ಮಾಡಿದರು. ಸಿಕ್ಕಸಿಕ್ಕಲ್ಲಿ ಅಡ್ಡಗಟ್ಟಿ, `ಅವರಿಗೆ ಜೈ ಹೇಳಿ ಇವರಿಗೆ ಜೈ ಹೇಳಿ` ಎಂದು ಕಿಚಾಯಿಸಿದರು. ನಾನು ಅದ್ಯಾವುದಕ್ಕೂ ಜಗ್ಗದೆ ನನ್ನ ಪಾಡಿಗೆ ನಾನು ಚಿತ್ರೀಕರಣದಲ್ಲಿ ತೊಡಗಿಕೊಂಡೆ.

`ಗುರು ಶಿಷ್ಯರು` ತೆರೆಗೆ ಬಂದು, ಯಶಸ್ವಿಯಾಯಿತು. ನೂರು ದಿನ ಓಡಿತು. ಬೆಂಗಳೂರಿನ `ಸಂಗಂ` ಚಿತ್ರಮಂದಿರದಲ್ಲಿ ಆ ಚಿತ್ರ ನೂರು ದಿನ ಪೂರೈಸಿದ ಸಮಾರಂಭ ಏರ್ಪಡಿಸಿದೆವು. ಆಗ ಮುಖ್ಯಮಂತ್ರಿಯಾಗಿದ್ದ ಗುಂಡೂರಾಯರನ್ನು ಮುಖ್ಯ ಅತಿಥಿಯಾಗಿ ಕರೆದೆವು. ಅವರಿಗೆ ನಾನು, ವಿಷ್ಣುವರ್ಧನ್ ಎಂದರೆ ತುಂಬಾ ಪ್ರೀತಿ. ಒಪ್ಪಿಕೊಂಡು ಬಂದಿದ್ದರು. ಅಲ್ಲಿ ಜನವೋ ಜನ. ಎಂಟ್ಹತ್ತು ಪೊಲೀಸ್ ವ್ಯಾನ್‌ಗಳು ಬಂದಿದ್ದವು. ಜನ ಎಲ್ಲಿ ಗಲಾಟೆ ಮಾಡಿಯಾರೋ ಎಂಬ ಆತಂಕ. ನಾನು, ವಿಷ್ಣು ಖುದ್ದು ಓಲಗ ಊದಿ ಅವರನ್ನು ಸ್ವಾಗತಿಸಿದೆವು. ನಮಗದು ಸಂತೋಷ ನೀಡುವ, ಹಾಸ್ಯ ಬೆರೆತ ಸಂದರ್ಭವಾಗಿತ್ತಷ್ಟೇ. ಆದರೆ, ಕೆಲವರು ನಾವಿಬ್ಬರೂ ಮುಖ್ಯಮಂತ್ರಿಗಳಿಗೆ ಬೆಣ್ಣೆ ಹಚ್ಚುತ್ತಿದ್ದೇವೆ ಎಂಬಂತೆ ಮಾತನಾಡಿದರು. ಕೆಲವು ಮಾಧ್ಯಮದಲ್ಲಿ ಅಂಥ ವರದಿಗಳೂ ಪ್ರಕಟವಾದವು.

ಆ ಸಮಾರಂಭ ನಡೆಯುವ ಜಾಗಕ್ಕೆ ಕಾರ್ತಿಕೇಯನ್ ದಿಢೀರನೆ ಬಂದರು. ರಾಜೀವ್‌ಗಾಂಧಿ ಹತ್ಯೆ ಪ್ರಕರಣ ಪತ್ತೆ ಮಾಡಿದ ತಂಡದಲ್ಲಿದ್ದ ಇಂಟೆಲಿಜೆನ್ಸ್ ಅಧಿಕಾರಿ ಅವರು. ಆಗ ಗುಂಡೂರಾಯರಿಗೆ ವಿಶೇಷ ಅಧಿಕಾರಿಯಾಗಿದ್ದರು. ಅವರು ಓಡೋಡಿ ಬಂದು, `ದ್ವಾರಕೀಶ್, ಸಮಾರಂಭವನ್ನು ನಿಲ್ಲಿಸಿ` ಎಂದು ಆತಂಕದ ದನಿಯಲ್ಲಿ ಹೇಳಿದರು. `ಒಂದು ಫೋನ್ ಬಂದಿದೆ, ಯಾರೋ ಬಾಂಬ್ ಇಟ್ಟಿದ್ದಾರಂತೆ` ಎಂದಾಗ ನನ್ನೆದೆಯ ಡವಡವ ಹೆಚ್ಚಾಯಿತು. ಗುಂಡೂರಾಯರಿಗೂ ವಿಷಯ ಮುಟ್ಟಿತು. ಅವರೆಲ್ಲಿ ಸಮಾರಂಭದಿಂದ ಹೊರನಡೆಯುತ್ತಾರೋ ಎಂದು ನಾನು ಆತಂಕಗೊಂಡೆ. ಆದರೆ, ಅವರು ನಿರ್ಭೀತರಾಗಿ ಮಾತನಾಡಿದರು. `ರಾಜಕೀಯದಲ್ಲಿ ಮಾತ್ರ ಕಾಲೆಳೆಯುವವರು ಇರುತ್ತಾರೆ ಎಂದುಕೊಂಡಿದ್ದೆ. ಸಿನಿಮಾರಂಗದಲ್ಲೂ ಅಂಥವರಿದ್ದಾರೆ ಎಂದಾಯಿತು. ಒಂದು ಸಿನಿಮಾ ನೂರು ದಿನ ಓಡಿದರೆ ಎಲ್ಲರೂ ಸಂತೋಷ ಪಡಬೇಕು. ಅದು ಬಿಟ್ಟು ಬಾಂಬ್ ಇಟ್ಟಿದ್ದೇವೆ ಎಂದು ಹೆದರಿಸುವುದು ಬೇಸರದ ಸಂಗತಿ. ಎದುರಿಗೆ ಬಂದು ಮಾತನಾಡುವವನು ಧೈರ್ಯಶಾಲಿ. ಅದು ಬಿಟ್ಟು, ಫೋನ್‌ನಲ್ಲಿ ಬೆದರಿಕೆ ಹಾಕುವುದು ಹೇಡಿಗಳ ಲಕ್ಷಣ. ನಾವೆಲ್ಲಾ ಹೆದರುವ ಅಗತ್ಯವಿಲ್ಲ. ಸತ್ತರೆ ಎಲ್ಲರೂ ಒಟ್ಟಾಗಿ ಸಾಯೋಣ` ಎಂದು ಭಾಷಣ ಮಾಡಿದರು. ಆ ಸಂದರ್ಭ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ. ಅವರ ಮಾತುಗಳನ್ನು ಕೇಳಿ ನನ್ನ ಆತಂಕ ದೂರವಾಯಿತು.

`ಮನೆ ಮನೆ ಕಥೆ` ಮುಗಿದ ಮೇಲೆ ಮತ್ತೆ ಸಮಸ್ಯೆಗಳ ಸರಮಾಲೆ. ನನ್ನ ಮನೆಯ ಎದುರು ಕುರಿ, ಕೋಳಿ ಮಾಂಸ ತಂದುಹಾಕುತ್ತಿದ್ದರು. ಮೊಟ್ಟೆಗಳನ್ನು ಒಡೆಯುತ್ತಿದ್ದರು. ಮಾಟ ಮಾಡಿಸಿದ ಯಾವ್ಯಾವುದೋ ವಸ್ತುಗಳನ್ನು ತಂದು ಹಾಕುತ್ತಿದ್ದರು. ರಾತ್ರೋ ರಾತ್ರಿ ಫೋನ್ ಮಾಡಿ, ನನ್ನ ಮಕ್ಕಳನ್ನು ಅಪಹರಿಸುವುದಾಗಿ ಬೆದರಿಸುತ್ತಿದ್ದರು. ನೆಮ್ಮದಿಯಿಂದ ನಿದ್ದೆ ಮಾಡುವುದೂ ಕಷ್ಟ ಎಂಬ ವಾತಾವರಣ ಸೃಷ್ಟಿಸಿದರು. ನನ್ನ, ವಿಷ್ಣು ಜಾತಿಯನ್ನೇ ಹಿಡಿದು ಇಲ್ಲಸಲ್ಲದ ಆರೋಪಗಳನ್ನು ಮಾಡಿದರು. ಸಿನಿಮಾಗಳ ಮೂಲಕ ಸ್ಪರ್ಧೆ ಒಡ್ಡದೆ ಹೀಗೆ ಬೆನ್ನಹಿಂದೆ ಪಿತೂರಿ ಮಾಡುವ ದೊಡ್ಡ ವರ್ಗವೇ ಚಿತ್ರೋದ್ಯಮದಲ್ಲಿದೆ ಎಂಬುದು ನನಗೆ ಸ್ಪಷ್ಟವಾಯಿತು.

ಅಷ್ಟಾದ ಮೇಲೂ ಸಿನಿಮಾ ಮಾಡುವುದನ್ನು ನಾನು ನಿಲ್ಲಿಸಲಿಲ್ಲ. ರಾಜಾಚಂದ್ರನನ್ನು ಮತ್ತೆ ಕರೆದುಕೊಂಡು ಬಂದೆ. `ಅದೃಷ್ಟವಂತ` ಸಿನಿಮಾ ಮಾಡಿದೆ. ರಾಜ್‌ಕುಮಾರ್ ಜೊತೆ ನಟಿಸಿದ್ದ ಸುಲೋಚನ ಅವರನ್ನು ಆ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದೆ. ಆ ಸಿನಿಮಾ ಚಿತ್ರೀಕರಣ ಪ್ರಾರಂಭವಾದ ಮೇಲೆ ಕಾಟ ಕೊಡುವವರು ಬೀದಿಗಿಳಿದರು. ಕಾರಿನಲ್ಲಿ ಸಾಗುವಾಗ ಅಡ್ಡಗಟ್ಟಿ ನಿಲ್ಲಿಸಿ, ಕೆಳಗಿಳಿಯುವಂತೆ ಒತ್ತಡ ಹೇರುತ್ತಿದ್ದರು. ಕೆಳಗಿಳಿದರೆ, `ಅವರಿಗೆ ಜೈ ಎನ್ನಿ ಇವರಿಗೆ ಜೈ ಎನ್ನಿ` ಎಂದು ಗೋಳುಹೊಯ್ದುಕೊಳ್ಳುತ್ತಿದ್ದರು. ನನಗಷ್ಟೇ ಅಲ್ಲ, ವಿಷ್ಣುವರ್ಧನ್‌ಗೂ ಇದೇ ಪರಿಸ್ಥಿತಿ ಎದುರಾಯಿತು. ಮೈಸೂರಿನಲ್ಲಿ ಚಿತ್ರೀಕರಣ ಮಾಡುವಾಗ ಪ್ರೀಮಿಯರ್ ಸ್ಟುಡಿಯೋಗಳಲ್ಲೂ ಗಲಾಟೆಗಳು ಪ್ರಾರಂಭವಾದವು. ಬೆಳಿಗ್ಗೆ ನಮ್ಮ ಬಳಿಗೆ ಅಭಿಮಾನಿಗಳಂತೆ ಬಂದು ವಿಚಿತ್ರವಾಗಿ ಮಾತನಾಡಿಸುತ್ತಿದ್ದ ಅನೇಕರು ರಾತ್ರಿ ಫೋನ್ ಮಾಡಿ, ಬಾಯಿಗೆ ಬಂದಂತೆ ಬೈಯುತ್ತಿದ್ದರು. ನಮ್ಮ ಪಾಡಿಗೆ ಸಿನಿಮಾ ಮಾಡಲು ಬಿಡದೆ ಹೀಗೆ ವಿನಾ ಕಾರಣ ತೊಂದರೆ ನೀಡುವವರ ಕಾಟ ಅತಿಯಾಯಿತು.

ರಾತ್ರಿ ಹೊತ್ತು ಫೋನ್ ರಿಂಗ್ ಆದರೆ ಮನೆಯಲ್ಲಿರುವವರಿಗೆಲ್ಲಾ ಭಯವಾಗುತ್ತಿತ್ತು. ಇನ್ನು ಬೆಂಗಳೂರಿನಲ್ಲಿ ಇರುವುದು ಕಷ್ಟ ಎಂದು ನನ್ನ ಮನಸ್ಸು ಹೇಳತೊಡಗಿತು.
avatar
dragon warrior

Posts : 95
Join date : 2012-10-06

Back to top Go down

ನನ್ನ ಭಾವಗಳ ಏರಿಳಿತ

Post by dragon warrior on Tue Oct 09, 2012 10:57 am

ನನ್ನ ಭಾವಗಳ ಏರಿಳಿತ

`ಕುಳ್ಳ ಕುಳ್ಳಿ` ಚಿತ್ರೀಕರಣ ಶುರುವಾಯಿತು. ಜಯಚಿತ್ರಾ ಮಾತಿಗೆ ತಕ್ಕಂತೆ ನಡೆದುಕೊಂಡರು. ಎಂದೂ ಚಿತ್ರೀಕರಣಕ್ಕೆ ತಡವಾಗಿ ಬರಲಿಲ್ಲ. ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಬರುತ್ತಿದ್ದರು. ಹೇಳಿದ ದೃಶ್ಯವನ್ನು ಅರ್ಥೈಸಿಕೊಂಡು ಅಗತ್ಯಕ್ಕೆ ಸ್ಪಂದಿಸುತ್ತಾ ನಟನೆ ಮಾಡಿದರು.

ಅವರ ಅಶಿಸ್ತಿನ ಕುರಿತು ನನ್ನ ಕಿವಿಗೆ ಯಾರ‌್ಯಾರೋ ಊದಿದ್ದ ಗಾಳಿಮಾತುಗಳೆಲ್ಲಾ ಸುಳ್ಳೆಂದು ಸ್ಪಷ್ಟವಾಯಿತು. ಕೊನೆಗೆ ಅವರು ಎಲ್ಲಾ ಸುದ್ದಿಗಾರರ ಎದುರು ಗೋಷ್ಠಿಯಲ್ಲಿ ನಿಂತು, `ದ್ವಾರಕೀಶ್ ನಾನು ಕಂಡ ಉತ್ತಮ ನಿರ್ಮಾಪಕರಲ್ಲಿ ಒಬ್ಬರು` ಎಂದಾಗ ನನ್ನ ಎದೆತುಂಬಿ ಬಂದಿತು.

ಕೇವಲ ಮೂವತ್ತೈದು ನಲವತ್ತು ದಿನಗಳಲ್ಲಿ ಸತತವಾಗಿ ಚಿತ್ರೀಕರಣ ನಡೆಸಿ ಸಿನಿಮಾ ಮುಗಿಸಿದೆವು. ಹಾಗೆ ನೋಡಿದರೆ, ನಾನು ಜಯಚಿತ್ರಾ ಅವರನ್ನು ನಾಯಕಿಯಾಗಿ ಆರಿಸಿದ್ದು ಅವರು ದೊಡ್ಡ ದೊಡ್ಡ ನಟರ ನಾಯಕಿ ಎಂಬ ಕಾರಣಕ್ಕಲ್ಲ; `ಹುಲಿಯ ಹಾಲಿನ ಮೇವು` ಚಿತ್ರ ನೋಡಿದ ಮೇಲೆ ನಾನು ಖುದ್ದು ಅವರ ಅಭಿಮಾನಿಯಾಗಿದ್ದೆ. ತಮ್ಮ ಅಭಿಮಾನಿಯೊಬ್ಬನ ಮೊರೆಗೆ ಓಗೊಟ್ಟು, ಅವರು `ಕುಳ್ಳ ಕುಳ್ಳಿ`ಯಲ್ಲಿ ನಾಯಕಿಯಾಗಿ ನಟಿಸಿದರೆಂದೇ ನನ್ನ ಭಾವನೆ.

ಮೊದಲು ಜಯಚಿತ್ರಾ ಅವರನ್ನು ನಾಯಕಿಯಾಗಿ ಇಟ್ಟುಕೊಂಡು ಅದು ಹೇಗೆ ಸಿನಿಮಾ ಮಾಡುತ್ತಾನೋ ಎಂದು ಕೆಲವರು ಪ್ರಶ್ನಾರ್ಥಕ ನೋಟ ಬೀರಿದ್ದರು. ಭಾರ್ಗವನಿಗೆ ಚಿತ್ರದ ನಿರ್ದೇಶನದ ಜವಾಬ್ದಾರಿ ಕೊಟ್ಟಮೇಲೆ ಇನ್ನು ಕೆಲವರು, ತಂಗಿಯ ಗಂಡ ಎಂಬ ಕಾರಣಕ್ಕೆ ಅವಕಾಶ ಕೊಟ್ಟಿದ್ದೇನೆ ಎಂದು ಮಾತನಾಡಿದರು.

ಭಾರ್ಗವ ನನ್ನ ತಂಗಿಯ ಗಂಡ ಆಗಿದ್ದರೂ ಚಿತ್ರರಂಗದಲ್ಲಿ ತನ್ನದೇ ಆದ ಅನುಭವ ಕಟ್ಟಿಕೊಂಡಿದ್ದ. ಸಿದ್ದಲಿಂಗಯ್ಯ, ಕೆ.ಎಸ್.ಆರ್.ದಾಸ್, ವಿಜಯಾರೆಡ್ಡಿ ಮೊದಲಾದ ಘಟಾನುಘಟಿ ನಿರ್ದೇಶಕರ ಗರಡಿಯಲ್ಲಿ ಅವನು ಕೆಲಸ ಮಾಡಿ, ಪಳಗಿದ್ದ.

ಮೊದಲಿನಿಂದಲೂ ಸಿನಿಮಾ ಕುರಿತು ತನ್ನದೇ ಆದ ಬದ್ಧತೆಯನ್ನು ಅವನು ಬೆಳೆಸಿಕೊಂಡು ಬಂದಿದ್ದ. ರೀಮೇಕ್ ಚಿತ್ರಗಳನ್ನು ನಿರ್ದೇಶಿಸುವುದು ಅವನಿಗೆ ಇಷ್ಟವಿರಲಿಲ್ಲ. ನಾನು ನನಗೆ ಹಿಡಿಸಿದ ಎಷ್ಟೋ ಸಿನಿಮಾಗಳಿಂದ ಸ್ಫೂರ್ತಿ ಪಡದೇ ಚಿತ್ರಗಳನ್ನು ಮಾಡುತ್ತಿದ್ದೆ. ಹಾಗಾಗಿ ನನ್ನ ಹಾಗೂ ಅವನ ನಡುವೆ ವಸ್ತುವಿನ ಆಯ್ಕೆಯ ವಿಷಯದಲ್ಲಿ ಮೊದಲು ಭಿನ್ನಾಭಿಪ್ರಾಯ ಇತ್ತೇನೋ.

ಆದರೆ, `ಕುಳ್ಳ ಕುಳ್ಳಿ` ಚಿತ್ರದ ನಂತರ ಅವನಿಗೆ `ಮಂಕುತಿಮ್ಮ`, `ಗುರು ಶಿಷ್ಯರು`, `ಪೆದ್ದ ಗೆದ್ದ` ಚಿತ್ರಗಳನ್ನು ನಿರ್ದೇಶಿಸುವ ಅವಕಾಶವನ್ನು ನಾನು ಕೊಟ್ಟೆ. ನನ್ನ ನಿರೀಕ್ಷೆ, ಶ್ರದ್ಧೆ ಬಹುಶಃ ಅವನಿಗೂ ಅರ್ಥವಾಯಿತು. `ಗುರು ಶಿಷ್ಯರು` ಚಿತ್ರವಂತೂ ಅನೇಕರು ನಿಬ್ಬೆರಗಾಗಿ ನೋಡುವಂತೆ ಮೂಡಿಬಂತು. ಇಂದಿಗೂ ಆ ಚಿತ್ರವನ್ನು ನೋಡಿದರೆ ಕಚಗುಳಿ ಇಡುತ್ತದೆ. ಅದು ಹಳತು ಎಂದೆನ್ನಿಸುವುದೇ ಇಲ್ಲ. ಆ ಚಿತ್ರದ ಇನ್ನಷ್ಟು ಒಳ ಹೊರಗಿನ ಕುರಿತು ಆಮೇಲೆ ಬರೆಯುತ್ತೇನೆ.

ಹಾಸ್ಯನಟನಾಗಿದ್ದ ನಾನು ಒಂದಾದ ಮೇಲೊಂದರಂತೆ ಸಿನಿಮಾಗಳನ್ನು ಮಾಡತೊಡಗಿದ ಮೇಲೆ ನನ್ನದೇ ಆದ ಸ್ಟೈಲ್ ರೂಢಿಸಿಕೊಂಡೆ. ಸಿನಿಮಾ ನಿರ್ಮಾಣದ ಶೈಲಿಯಲ್ಲಷ್ಟೇ ಅಲ್ಲದೆ ನನ್ನ ವರ್ತನೆಯೂ ಸ್ಟೈಲಿಶ್ ಆಗಿಯೇ ಇತ್ತು. 1978ರಲ್ಲಿ ಇಂಪೋರ್ಟೆಡ್ ಕಾರು ತಂದು, ಅದರಲ್ಲಿ ಗತ್ತಿನಿಂದ ಓಡಾಡತೊಡಗಿದೆ. ಸಿಂಗಪೂರ್‌ನಿಂದ ಏಸಿ ತಂದು ಅದನ್ನು ನನ್ನ ಕಾರ್‌ಗೆ ಅಳವಡಿಸಿದ್ದೆ. ಆ ಕಾಲಘಟ್ಟದಲ್ಲಿ ಕಾರ್‌ನಲ್ಲಿ ಏಸಿ ಇದೆ ಎಂಬುದೇ ಪ್ರತಿಷ್ಠೆಯ ವಿಷಯವಾಗಿತ್ತು. ಆಗ ದ್ವಾರಕೀಶ್ ಏಸಿ ಕಾರ್‌ನಲ್ಲಿ ಓಡಾಡುತ್ತಾನೆ ಎಂಬುದು ಸುದ್ದಿಯೇ ಹೌದಾಗಿತ್ತು.

ಅಂದುಕೊಂಡ ರೀತಿಯಲ್ಲಿ, ನಿಗದಿಪಡಿಸಿದ ಗಡುವಿನೊಳಗೇ ಸಿನಿಮಾ ಚಿತ್ರೀಕರಣ ಮುಗಿಯಬೇಕು ಎಂಬುದು ನನಗೆ ನಾನೇ ಹಾಕಿಕೊಂಡಿದ್ದ ನಿಯಮ. ಹಾಗಾಗಿ ಆ ಶಿಸ್ತನ್ನು ಸಡಿಲಿಸಲು ನಾನು ಸುತರಾಂ ಸಿದ್ಧನಿರಲಿಲ್ಲ. ಬದುಕಿನಲ್ಲಿ ನಾನು ಎಷ್ಟು ಸ್ಟೈಲಿಶ್ ಆಗಿದ್ದೆನೋ ಕೆಲಸದ ವಿಷಯದಲ್ಲಿ ಅಷ್ಟೇ ಶಿಸ್ತುಬದ್ಧನಾಗಿದ್ದೆ. ನಾನು ನಿರ್ದಾಕ್ಷಿಣ್ಯವಾಗಿ ಇದ್ದದ್ದನ್ನು ಇದ್ದ ಹಾಗೆಯೇ ಹೇಳಿಬಿಡುತ್ತಿದ್ದೆ. ಆ ನಿಷ್ಠುರ ಸ್ವಭಾವವನ್ನು ಕಂಡ ಅನೇಕರು `ದ್ವಾರಕೀಶ್‌ಗೆ ದುರಹಂಕಾರ` ಎಂದು ಮಾತನಾಡಿಕೊಂಡರು.

ಭಾರ್ಗವ, ನನ್ನ ತಂಗಿ, ನಾನು, ಅಂಬುಜಾ ಪದೇಪದೇ ಟೂರ್ ಹೊಡೆಯುತ್ತಿದ್ದೆವು. ಎಲ್ಲರೂ ಒಂದೇ ಕುಟುಂಬ ಎಂಬ ಭಾವನೆ. ಆಗ ನನ್ನ ತಂಗಿ, ಭಾರ್ಗವ ಬೆಂಗಳೂರಿನ ಎನ್.ಆರ್.ಕಾಲೋನಿಯ ನಮ್ಮ ಮನೆಯಲ್ಲೇ ತಂಗಿದ್ದರು.

ಲಂಕೇಶ್ ಜೊತೆ ಓಡಾಡಿಕೊಂಡಿದ್ದ ಪ್ರಭಾಕರ ರೆಡ್ಡಿ ಒಂದು ಸಿನಿಮಾ ಮಾಡೋಣ ಎಂದು ಹೇಳುತ್ತಿದ್ದ. ಅವನೂ ನನಗೆ ಒಳ್ಳೆಯ ಸ್ನೇಹಿತ. ಮುಂದೆ ನಾವಿಬ್ಬರೂ ಸೇರಿ `ವೇದಪ್ರದ ಪಿಕ್ಚರ್ಸ್‌` ಎಂಬ ಚಿತ್ರ ವಿತರಣ ಸಂಸ್ಥೆ ಮಾಡಿದೆವು. ಮಾಂಡ್ರೆಯವರ ದೊಡ್ಡ ಸಂಸ್ಥೆಯ ಜೊತೆ ಅದು ಒಡಂಬಡಿಕೆ ಮಾಡಿಕೊಂಡಿತು. ಆ ಪ್ರಭಾಕರ ರೆಡ್ಡಿ ಬಯಕೆ ಈಡೇರಿಸಲೆಂದೇ ನಾವು `ಗುರು ಶಿಷ್ಯರು` ಸಿನಿಮಾ ಎತ್ತಿಕೊಂಡದ್ದು.

`ಗುರು ಶಿಷ್ಯರು` ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭ. ರಾತ್ರಿ ಒಂಬತ್ತು ಗಂಟೆ ಇರಬೇಕು. ಒಂದು ಸ್ಟಿಲ್ ತೆಗೆಯಬೇಕಿತ್ತು. ಆಗ ಅಂದುಕೊಂಡಂತೆ ಏನೋ ಆಗುತ್ತಿಲ್ಲ ಎಂಬ ಕಾರಣಕ್ಕೆ ನನಗೆ ಸಿಟ್ಟುಬಂತು. ಸಾಕಷ್ಟು ಕೂಗಾಡಿದೆ. ಆಮೇಲೆ ಕಾರಿನಲ್ಲಿ ಹೋಗುವಾಗಲೂ ನನ್ನ ಕೋಪ ತಣ್ಣಗಾಗಿರಲಿಲ್ಲ. ಅಲ್ಲೂ ಕೂಗಾಟ ಮುಂದುವರಿಸಿದೆ. ಅದೇನಾಯಿತೋ ಚಲಿಸುತ್ತಿದ್ದ ಕಾರಿನಿಂದ ಭಾರ್ಗವ ಹೊರಗೆ ಧುಮುಕಿಬಿಟ್ಟ. ನನಗೆ ಏನಾಗಿಹೋಯಿತು ಎಂಬ ಚಿಂತೆ. ಕಾರು ನಿಲ್ಲಿಸಿ, ಧುಮುಕಿದ್ದ ಭಾರ್ಗವನನ್ನು ಸಮಾಧಾನ ಪಡಿಸಲು ಯತ್ನಿಸಿದೆ. ಮನೆಯಲ್ಲೂ ವಿಷಯ ಗೊತ್ತಾಯಿತು. ನನ್ನ ತಾಯಿ ನನ್ನನ್ನು ಬಾಯಿಗೆ ಬಂದಂತೆ ಬೈದರು. ಆ ದಿನ ರಾತ್ರಿ ಎನ್.ಆರ್. ಕಾಲೋನಿಯ ಮನೆಯಲ್ಲಿ ನೀರವ ಮೌನ.

ಪ್ರಭಾಕರ ರೆಡ್ಡಿ ಕೂಡ ಫೋನ್ ಮಾಡಿ, `ಇದೇನಯ್ಯಾ ನೀನು, ಅಷ್ಟೊಂದು ಕೋಪ ಮಾಡಿಕೊಳ್ಳುವುದೇ? ಅವನು ನಿನ್ನ ತಂಗಿಯ ಗಂಡ. ಸ್ವಲ್ಪ ಸಮಾಧಾನದಿಂದ ಇರಬಾರದೇ ನೀನು` ಎಂದೆಲ್ಲಾ ಬುದ್ಧಿ ಹೇಳಿದ. ನನಗೂ ಅಹಂಕಾರವಿತ್ತೇನೋ. ಆದರೆ, ಅದಿದ್ದದ್ದು ಶಿಸ್ತಿನ ಕಾರಣಕ್ಕೆ. ಅದು ಅಹಂಕಾರವೋ, ಶಿಸ್ತೋ, ಕೆಲಸದ ಬಗ್ಗೆ ನನಗೆ ಇದ್ದ ಬದ್ಧತೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ನನ್ನ ಕೋಪದ ಮಾತುಗಳು ನಮ್ಮ ಕುಟುಂಬದಲ್ಲೇ ದೊಡ್ಡ ಚರ್ಚೆಗೆ ಕಾರಣವಾಗಿದ್ದವು. ಒಂದು ರೀತಿಯಲ್ಲಿ ಆ ಘಟನೆ ನನಗೆ ಪಾಠ ಕಲಿಸಿತೆನ್ನಿ. ಆಮೇಲೆ ನಾನು ಸಾಕಷ್ಟು ಮೆತ್ತಗಾದೆ.

ಸಿ.ವಿ.ರಾಜೇಂದ್ರನ್, ಕೆ.ಎಸ್.ಆರ್.ದಾಸ್ ನಿರ್ದೇಶನ ಮಾಡುವಾಗಲೂ ನಾನು ರೇಗಾಡಿದ್ದುಂಟು. ಈಗ ನೋಡಿದರೆ, ಭಾರ್ಗವ ಹೀಗೆ ಮಾಡಿಬಿಟ್ಟಿದ್ದ. ಎಲ್ಲೋ ನನ್ನಲ್ಲೇ ಸಮಸ್ಯೆ ಇರಬಹುದು ಎನ್ನಿಸಿತು. ಕೋಪವನ್ನು ಆದಷ್ಟೂ ಇಳಿಸಿಕೊಂಡು ವರ್ತಿಸಲಾರಂಭಿಸಿದೆ. ಕೊನೆಗೂ `ಗುರು ಶಿಷ್ಯರು` ಸಿನಿಮಾ ಮುಗಿಯಿತು. ತೆರೆಗೆ ಬಂದಿತು. ನೂರು ದಿನ ಓಡಿತು. ಅಷ್ಟೆಲ್ಲಾ ಕಷ್ಟ ಪಟ್ಟಿದ್ದು, ಸಿಟ್ಟು ಮಾಡಿಕೊಂಡಿದ್ದು, ಮುನಿಸು ಎಲ್ಲಕ್ಕೂ ಅದು ಉತ್ತರರೂಪ ಎಂಬಂತೆಯೇ ಕಂಡಿತು.

1972-74ರಿಂದ 1980ರ ದಶಕದ ಆರಂಭದವರೆಗೆ ನನ್ನದೇ ಜಮಾನ ಕಂಡಿದ್ದ ನಾನು ಆಮೇಲೆ ತೊಂದರೆಗಳನ್ನು ಎದುರಿಸಬೇಕಾಯಿತು. ಬದುಕೆಂದರೆ ಹಾಗೆಯೇ ಅಲ್ಲವೇ?
ವಿಷ್ಣುವರ್ಧನ್ ಇಲ್ಲದೆಯೇ ಕೆಲವು ಚಿತ್ರಗಳನ್ನಾದರೂ ತೆಗೆಯುವ ಧೈರ್ಯ ಮಾಡಿದ್ದ ನಾನು `ಗುರು ಶಿಷ್ಯರು` ಸಿನಿಮಾಗಿಂತ ಮೊದಲು ಮಾಡಿದ್ದು `ಮಂಕುತಿಮ್ಮ`. ಮಂಜುಳಾ ಆ ಚಿತ್ರಕ್ಕೆ ನಾಯಕಿಯಾಗಬೇಕೆಂದು ಬಯಸಿದವನೂ ನಾನೇ. ನಾನು ನಾಯಕನಾಗಿ ಅಭಿನಯಿಸಿದ ಚಿತ್ರಗಳಲ್ಲೆಲ್ಲಾ ದೊಡ್ಡ ನಾಯಕಿಯರೇ ಇದ್ದರು. ಅದು ಕೂಡ ನನ್ನ ಸ್ಟೈಲ್.

ವಿಷ್ಣು ಜೊತೆ ಅಷ್ಟೆಲ್ಲಾ ಒಳ್ಳೆಯ ಚಿತ್ರಗಳನ್ನು ಮಾಡಿದ್ದರಿಂದ ಮತ್ತೆ ಆ ಒಳ್ಳೆಯ ನಟನನ್ನು ಸೇರಿಸಿಕೊಳ್ಳಲೇಬೇಕು ಎಂದು ಒತ್ತಾಯ ಮಾಡಿದ್ದು ಪ್ರಭಾಕರ ರೆಡ್ಡಿ. ಬಹುಶಃ `ಮನೆ ಮನೆ ಕಥೆ` ಚಿತ್ರದ ಮೂಲಕ ವಿಷ್ಣು ನನ್ನ ಚಿತ್ರಲೋಕಕ್ಕೆ ಮರುಪ್ರವೇಶ ಮಾಡಿದ. ಅನೇಕರು ನನ್ನಲ್ಲಿ ಇದೆ ಎನ್ನುತ್ತಿದ್ದ ದುರಹಂಕಾರವೇ ವಿಷ್ಣುವನ್ನೂ ನಾನು ಒಂದಿಷ್ಟು ಕಾಲ ದೂರ ಮಾಡಿಕೊಳ್ಳಲು ಕಾರಣವಾಗಿತ್ತೋ ಏನೋ?
avatar
dragon warrior

Posts : 95
Join date : 2012-10-06

Back to top Go down

`ಕುಳ್ಳಿ'ಯಾಗಲು ಒಪ್ಪಿದ ಜಯಚಿತ್ರಾ

Post by dragon warrior on Tue Oct 09, 2012 10:59 am

`ಕುಳ್ಳಿ'ಯಾಗಲು ಒಪ್ಪಿದ ಜಯಚಿತ್ರಾ

ಮೊದಲಿನಿಂದಲೂ ನನಗೆ ಅಂದುಕೊಂಡದ್ದನ್ನು ಮಾಡಿಯೇ ತೀರುವ ಉತ್ಕಟತೆ. `ಸಿಂಗಪುರ್‌ನಲ್ಲಿ ರಾಜಾ ಕುಳ್ಳ` ಚಿತ್ರಕ್ಕೆ ವಿದೇಶದಲ್ಲಿ ಮೂವತ್ತು ದಿನ ಚಿತ್ರೀಕರಣ ನಡೆಸಿ ಬಂದಮೇಲೂ ನನ್ನ ಬಯಕೆ ಕಡಿಮೆಯಾಗಲಿಲ್ಲ. `ಪ್ರೇಮ ಪ್ರೀತಿ ನನ್ನುಸಿರು` ಎಂಬ ಹಾಡನ್ನು ಸೊಗಸಾದ ಸೆಟ್‌ನಲ್ಲೇ ಚಿತ್ರೀಕರಿಸಬೇಕೆಂಬುದು ನನ್ನ ಪಟ್ಟು.

ವೀರಾಸ್ವಾಮಿಯವರು, `ಸಿಂಗಪುರ್‌ಗೆ ಹೋಗಿ, ಅಷ್ಟೆಲ್ಲ ಖರ್ಚು ಮಾಡಿಕೊಂಡು ಬಂದಮೇಲೆ ಮತ್ತೆ ಇಲ್ಲಿ ಯಾಕೆ ದುಬಾರಿ ಸೆಟ್ ಹಾಕಿಸುತ್ತೀಯ` ಎಂದು ಕಿವಿಮಾತು ಹೇಳಿದರು. ನನಗೆ ಆ ಹಾಡು ಅದ್ಭುತವಾಗಿ ಮೂಡಿಬರಬೇಕೆಂಬ ಬಯಕೆ.

ಮುತ್ತುಗಳಲ್ಲೇ `ಲಸ್ಟರ್` ಮಾಡಿಸಿ, ಸೊಗಸಾದ ಸೆಟ್ ಹಾಕಿಸಿದೆ. ಆ ಕಾಲದಲ್ಲಿ ಅದಕ್ಕೆ ಏಳೆಂಟು ಲಕ್ಷ ರೂಪಾಯಿ ಖರ್ಚಾಯಿತು. ನಲವತ್ತು ಅರವತ್ತು ಡಾನ್ಸರ್‌ಗಳನ್ನು ಹಾಕಿ, ಆ ಹಾಡನ್ನು ಚಿತ್ರೀಕರಿಸಿದೆವು. ಆ ಲಸ್ಟರ್‌ಗೆ ಉಪಯೋಗಿಸಿದ ಮುತ್ತುಗಳನ್ನೆಲ್ಲಾ ಬಾಬ್ಜಿ ಎಂಬ ವಿತರಕರಿಗೆ ಹುಬ್ಬಳ್ಳಿಯಲ್ಲಿ ಚಿತ್ರಮಂದಿರಗಳನ್ನು ಅಲಂಕಾರ ಮಾಡಲು ಕೊಟ್ಟೆ.

ನನ್ನ ಸಾಹಸಗಳಿಗೆ ನಾನೇ ಹೊಣೆಗಾರ. ಆದರೂ ಯಾರಾದರೂ ಆಪ್ತೇಷ್ಟರು ಫೋನ್ ಮಾಡಿದರೆ ನಾನು ಬೇಕಾದದ್ದನ್ನು ಕೇಳಿದ್ದೂ ಇದೆ. ನಾನು ಸಿಂಗಪೂರ್‌ನಲ್ಲಿ ಚಿತ್ರೀಕರಣಕ್ಕೆ ಹೋಗಿದ್ದ ಸಂಗತಿ ತಾರಣ್ಣನ ಕಿವಿಗೆ ಬಿತ್ತು. ಅಮೆರಿಕದಲ್ಲಿ ಅದಾಗಲೇ ನೆಲೆಸಿದ್ದ ಅವನು ಫೋನ್ ಮಾಡಿ, `ಸಿಂಗಪೂರ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದೀಯಂತೆ... ಗುಡ್` ಎಂದು ಮಾತಿಗೆ ಶುರುವಿಟ್ಟ. ಹತ್ತು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ, ಎಲ್ಲಾ ಚೆನ್ನಾಗಿದೆ ಎಂದೆಲ್ಲಾ ನಾನು ಕೇಳಿದೆ.

ಆಮೇಲೆ ಅವನನ್ನು ಒಂದಿಷ್ಟು ಡಾಲರ್ ಕೇಳೋಣ ಎಂದುಕೊಂಡು ನಾನು, `ತಾರಣ್ಣ ಒಂದಿಷ್ಟು ಡಾಲರ್‌ಗಳನ್ನು ಕಳಿಸಪ್ಪಾ` ಎಂದೆ. ತಕ್ಷಣ ಅವನು, `ಹಲೋ... ಹಲೋ... ಹಲೋ... ಸರಿಯಾಗಿ ಕೇಳಿಸುತ್ತಿಲ್ಲ` ಎನ್ನತೊಡಗಿದ. ಬೇರೆ ಮಾತುಗಳೆಲ್ಲಾ ಕೇಳಿಸಿಕೊಳ್ಳುತ್ತಿದ್ದ ಅವನು ಡಾಲರ್ ಕೇಳಿದಾಕ್ಷಣ, ಧ್ವನಿಯೇ ಕೇಳುತ್ತಿಲ್ಲ ಎಂಬಂತೆ ನಟಿಸಿದ.

ಅದನ್ನೂ ನಾನು ತಮಾಷೆಯಾಗಿಯೇ ಸ್ವೀಕರಿಸಿದೆ ಎಂಬುದು ಬೇರೆ ಮಾತು. ನಾನು ಅನುಭವಿಸಿದ ಇದೇ ದೃಶ್ಯವನ್ನು ಪ್ರಿಯದರ್ಶನ್ ನಿರ್ದೇಶನದ ಚಿತ್ರವೊಂದರಲ್ಲಿ ನೋಡಿ, ಚಕಿತಗೊಂಡೆ. ನಮ್ಮ ಬದುಕಿನ ದೃಶ್ಯಗಳಿಗೂ ಸಿನಿಮಾ ದೃಶ್ಯಗಳಿಗೂ ಹೇಗೆ ಸಂಬಂಧ ಒದಗುತ್ತದೆ, ನೋಡಿ.

`ಪ್ರೀತಿ ಮಾಡು ತಮಾಷೆ ನೋಡು` ಚಿತ್ರದ ಡಬ್ಬಿಂಗ್ ಕ್ಷಣಗಳು ಇನ್ನೂ ಕಣ್ಣಿಗೆ ಕಟ್ಟಿದಹಾಗಿವೆ. ಆಗ ಡಬ್ಬಿಂಗ್ ಮಾಡಲು `ಲೂಪ್ ಸಿಸ್ಟಂ` ಇತ್ತು. ಈಗಿನಂತೆ ಒಬ್ಬೊಬ್ಬರೇ ಡಬ್ಬಿಂಗ್ ಮಾಡಲು ಆಗುತ್ತಿರಲಿಲ್ಲ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಎಲ್ಲರೂ ಒಟ್ಟಾಗಿ ಡಬ್ಬಿಂಗ್ ಮಾಡಿದೆವು. ಇದ್ದದ್ದು ಎರಡು ಮೈಕ್; ಎರಡೇ ಟ್ರ್ಯಾಕ್.

ನಾನು, ಶ್ರೀನಾಥ್, ಶಂಕರ್‌ನಾಗ್, ಮಂಜುಳಾ, ಪದ್ಮಪ್ರಿಯಾ, ಬಾಲಕೃಷ್ಣ, ನರಸಿಂಹರಾಜು, ಪ್ರಮೀಳಾ ಜೋಷಾಯ್ ಮತ್ತಿತರ ಕಲಾವಿದರು ಅಲ್ಲಿ ಜಮಾಯಿಸಿದ್ದೆವು. 15ರಿಂದ 20 ದಿನ ಸತತವಾಗಿ ಏಳು ದಿನ ಡಬ್ಬಿಂಗ್ ಮಾಡಿದೆವು. ನಮ್ಮ ನಮ್ಮ ಪಾತ್ರ ಬಂದಾಗ, ಮೈಕ್‌ನಲ್ಲಿ ಹೋಗಿ ಮಾತನಾಡುತ್ತಿದ್ದೆವು.

ಡಬ್ಬಿಂಗ್ ಮುಗಿಯುತ್ತಾ ಬಂದಾಗ ನರಸಿಂಹರಾಜಣ್ಣ ಬಂದು ನನ್ನನ್ನು ಮಾತನಾಡಿಸಿದರು. ಆ ದಿನ ಬಹುಶಃ ಭಾನುವಾರ. ಮಧ್ಯಾಹ್ನ 1.30 ಗಂಟೆ ಸಮಯ ಇರಬೇಕು. ಒಂಥರಾ ಮೂಡಲ್ಲಿದ್ದರು. ಬಂದು ಕೂತವರೇ, `ಡಬ್ಬಿಂಗ್ ಎಲ್ಲಾ ಮುಗೀತೇನಪ್ಪ?` ಎಂದು ಕೇಳಿದರು. ಊಟ ಮಾಡಿದರು. ಆಮೇಲೆ ಅದೇ ಜಾಗದಲ್ಲಿ ಕುಳಿತು ಸುಮಾರು ಮೂರು ಗಂಟೆ ಮಾತನಾಡಿದರು.

`ಬಿ.ಆರ್. ಪಂತುಲು ತರಹದ ನಿರ್ಮಾಣ ಸಂಸ್ಥೆ ನಿನ್ನದಾಗಬೇಕು. ಸ್ಟೀಲ್ ತಟ್ಟೆ, ಲೋಟಗಳನ್ನು ತರಿಸಿಡು. ಒಳ್ಳೊಳ್ಳೆಯ ಸಿನಿಮಾಗಳನ್ನು ತೆಗಿ` ಎಂದೆಲ್ಲಾ ಹೇಳುತ್ತಾ ಹೋದರು. ಕೊನೆಯಲ್ಲಿ, `ನೀನ್ಯಾಕೆ ನನ್ನನ್ನು ಸಿಂಗಪೂರ್‌ಗೆ ಕರೆದುಕೊಂಡು ಹೋಗಲಿಲ್ಲ? ಕೆಮ್ಮಣ್ಣುಗುಂಡಿಯಲ್ಲಿ ಶೂಟಿಂಗ್ ಆಗುವ ಸಿನಿಮಾಗೆ ನಾನು ಬೇಕು, ಸಿಂಗಪೂರ್‌ಗೆ ಬೇಡವಾದೆನೆ` ಎಂದು ಬೇಸರಪಟ್ಟರು.

ಕನ್ನಡ ಚಿತ್ರರಂಗದಲ್ಲಿ `ಹಾಸ್ಯ ಚಕ್ರವರ್ತಿ` ಎಂದೇ ಹೆಸರಾಗಿದ್ದ ನರಸಿಂಹರಾಜು ಒಮ್ಮೆಯೂ ವಿದೇಶದಲ್ಲಿ ಬಣ್ಣ ಹಚ್ಚಿರಲಿಲ್ಲ. ಛೆ, ಎಂಥಾ ಕೆಲಸವಾಯಿತು; ಅವರನ್ನು ಕರೆದುಕೊಂಡು ಹೋಗಬೇಕಿತ್ತು ಎಂದು ನನಗೆ ಅನ್ನಿಸಿದ್ದು ಆಗಲೇ. `ಮುಂದೆ ಲಂಡನ್‌ನಲ್ಲಿ ಇನ್ನೊಂದು ಸಿನಿಮಾ ತೆಗೆಯುತ್ತೇನೆ. ಅದರಲ್ಲಿ ಖಂಡಿತ ನಿಮಗೊಂದು ಪಾತ್ರ ಇದ್ದೇ ಇರುತ್ತದೆ` ಎಂದು ಅವರಿಗೆ ಮಾತುಕೊಟ್ಟೆ.

ಆ ರಾತ್ರಿಯೇ ನಾನು ಮದ್ರಾಸ್‌ಗೆ ಹೋದೆ. ಮರುದಿನ ಬೆಳಗಿನ ಜಾವ ನರಸಿಂಹರಾಜಣ್ಣ ಹೋಗಿಬಿಟ್ಟರು ಎಂಬ ಸುದ್ದಿ ಗೊತ್ತಾಯಿತು. ವಾಪಸ್ ಬೆಂಗಳೂರಿಗೆ ಬಂದು, ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದೆ. ಗಂಟೆಗಟ್ಟಲೆ ತಮ್ಮ ಬದುಕಿನ ಸುಖ-ದುಃಖಗಳನ್ನು ಹಂಚಿಕೊಂಡಿದ್ದ ನರಸಿಂಹರಾಜಣ್ಣ, ತಮ್ಮ ಬೇಗುದಿಯ ನಡುವೆಯೇ ಅಷ್ಟೊಂದು ಜನರನ್ನು ಹಾಸ್ಯದಿಂದ ರಂಜಿಸಿದ್ದರು.

ಅವರ ಒಬ್ಬ ಮಗ ಅಪಘಾತದಲ್ಲಿ ತೀರಿಹೋಗಿದ್ದ. ಆ ಆಘಾತವನ್ನೂ ಅವರು ನನ್ನಲ್ಲಿ ಹೇಳಿಕೊಂಡಿದ್ದರು. ಅವರು ಕೊನೆಯುಸಿರೆಳೆಯುವ ಮುನ್ನಾದಿನ ನಾನು ಅವರೊಡನೆ ಕಳೆದ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ. `ಪ್ರೀತಿ ಮಾಡು ತಮಾಷೆ ನೋಡು` ನರಸಿಂಹರಾಜಣ್ಣ ಅಭಿನಯಿಸಿದ ಕೊನೆ ಸಿನಿಮಾ ಆಯಿತು.

ನರಸಿಂಹರಾಜಣ್ಣ ಹಾಗೂ ಬಾಲಣ್ಣ ನಾನು ಮರೆಯಲಾಗದ ನಟರು. ಬಾಲಣ್ಣ ಕೂಡ ನನ್ನ ಸಿನಿಮಾಗಳಲ್ಲಿ ಅಭಿನಯಿಸುವಂತೆ ಕೇಳಿದಾಗಲೆಲ್ಲಾ ಸಂತೋಷದಿಂದ ಬರುತ್ತಿದ್ದರು. ಎಂದೂ ಇಷ್ಟೇ ಹಣ ಕೊಡು ಎಂದು ಕೇಳುತ್ತಿರಲಿಲ್ಲ. ನರಸಿಂಹರಾಜಣ್ಣ ನನ್ನನ್ನು ತಮ್ಮ ಮಗ ಎಂಬಂತೆಯೇ ಭಾವಿಸಿ ಎಷ್ಟೋ ಸಂಗತಿಗಳನ್ನು ಹಂಚಿಕೊಂಡಿದ್ದರು. ಅಂಥ ಅದ್ಭುತ ಹಾಸ್ಯನಟನನ್ನು ಕನ್ನಡ ಚಿತ್ರರಂಗ ಇದುವರೆಗೆ ನೋಡಲೇ ಇಲ್ಲ.

`ಕುಳ್ಳ ಕುಳ್ಳಿ` ಸಿನಿಮಾ ಮಾಡಲು ಪ್ರೇರಣೆ ಸಿಕ್ಕಿದ್ದು `ಪ್ರೀತಿ ಮಾಡು ತಮಾಷೆ ನೋಡು` ಚಿತ್ರೀಕರಣದ ಸಂದರ್ಭದಲ್ಲಿ. ನಾವು ಮಂಗಳೂರಿನಲ್ಲಿ ಉಳಿದುಕೊಂಡಿದ್ದೆವು. ವುಡ್‌ಸೈಡ್ ಹೋಟೆಲ್ ಎದುರು ಪ್ರಭಾ ಟಾಕೀಸ್ ಇತ್ತು. ಸಂಜೆ 6.30ರ ವೇಳೆ. ಅಲ್ಲಿ ಜನವೋ ಜನ. `ಹುಲಿಯ ಹಾಲಿನ ಮೇವು` ಚಿತ್ರ ಆಗಿನ್ನೂ ಬಿಡುಗಡೆಯಾಗಿತ್ತು. ನಾನೂ ಹೋಗಿ ಸಿನಿಮಾ ನೋಡಿದೆ. ಅದರಲ್ಲಿ ತಮಿಳಿನಲ್ಲಿ ಜನಪ್ರಿಯರಾಗಿದ್ದ ಜಯಚಿತ್ರಾ ಅಭಿನಯಿಸಿದ್ದರು.

ಎನ್.ಟಿ.ಆರ್, ನಾಗೇಶ್ವರರಾವ್, ಶಿವಾಜಿಗಣೇಶನ್ ತರಹದ ಘಟಾನುಘಟಿಗಳ ಎದುರು ನಾಯಕಿಯಾಗಿ ಅಭಿನಯಿಸಿದ್ದ ಅನುಭವಿ ಅವರು. `ಹುಲಿಯ ಹಾಲಿನ ಮೇವು` ಚಿತ್ರದಲ್ಲಿ ಅವರ ಹಾವಭಾವ, ಅಭಿನಯ ಕೌಶಲ ಕಂಡು ಅವರ ಜೊತೆ ನಾನೂ ಒಂದು ಸಿನಿಮಾ ಮಾಡಬೇಕು ಎಂಬ ಬಯಕೆ ಚಿಗುರೊಡೆಯಿತು.

ಆಮೇಲೆ ಮಂಗಳೂರಿನಿಂದಲೇ ಅವರಿಗೆ ಫೋನ್ ಮಾಡಿದೆ. `ನಿಮ್ಮ ಹುಲಿಯ ಹಾಲಿನ ಮೇವು ಚಿತ್ರ ನೋಡಿದೆ. ತುಂಬಾ ಚೆನ್ನಾಗಿ ಅಭಿನಯಿಸಿದ್ದೀರಿ. ನಾನೊಬ್ಬ ಸ್ಮಾಲ್‌ಟೈಮ್ ಕಾಮಿಡಿಯನ್. ಒಂದು ಸಿನಿಮಾ ಮಾಡಬೇಕೆಂದಿದ್ದೇನೆ. ನೀವು ಅದರಲ್ಲಿ ನಟಿಸಬೇಕು. ನಾನು ನಿಮ್ಮ ಅಭಿಮಾನಿ. ನಿಮ್ಮ ಜೊತೆ ನನಗೂ ನಟಿಸುವ ಅವಕಾಶ ಕಲ್ಪಿಸಿಕೊಡಿ` ಎಂದು ವಿನಂತಿಸಿದೆ. ನನ್ನ ಮಾತುಗಳನ್ನು ಕೇಳಿದ ಮೇಲೆ ಅವರು ಒಮ್ಮೆ ಭೇಟಿ ಮಾಡಲು ಅವಕಾಶ ಕೊಡುವುದಾಗಿ ಹೇಳಿದರು.

`ಕುಳ್ಳ ಕುಳ್ಳಿ` ಚಿತ್ರದ ನಾಯಕಿ ಜಯಚಿತ್ರಾ ಎಂದು ನಾನು ಆಪ್ತೇಷ್ಟರಲ್ಲಿ ಹೇಳಿದೆ. ಸಿನಿಮಾದ ಅನೇಕರು ನನ್ನನ್ನು ಹೆದರಿಸಿದರು. `ಅವರು ಸೆಟ್‌ಗೆ ಸರಿಯಾದ ಸಮಯಕ್ಕೆ ಬರುವುದಿಲ್ಲ. ಕಿರಿಕ್ ಮಾಡುತ್ತಾರೆ` ಎಂದು ಏನೇನೋ ಹೇಳಿದರು. ನನಗೆ ಆತಂಕ ಶುರುವಾಯಿತು. ಪರದೆ ಮೇಲೆ ಅವರನ್ನು ನೋಡಿ ತುಂಬಾ ಮೆಚ್ಚಿಕೊಂಡಿದ್ದ ನನಗೆ ಅವರನ್ನು ಬಿಟ್ಟು ಸಿನಿಮಾ ಮಾಡಲು ಸುತರಾಂ ಇಷ್ಟವಿರಲಿಲ್ಲ.

ಮದ್ರಾಸ್‌ಗೆ ಹೋದಮೇಲೆ ಅವರಿಗೆ ಫೋನ್ ಮಾಡಿದೆ. ಮಾತನಾಡುವ ಅವಕಾಶ ಸಿಕ್ಕಿತು. ಅವರಿಗೆ ಚಿತ್ರಕತೆಯನ್ನು ವಿವರಿಸಿದೆ. ಚಿತ್ರೀಕರಣದ ವಿಷಯದಲ್ಲಿ ನಾನು ಶಿಸ್ತಿನ ಮನುಷ್ಯ ಎಂಬುದನ್ನೂ ಆಗಲೇ ಹೇಳಿದೆ. ಬೆಳಿಗ್ಗೆ 9- 9.30ಕ್ಕೆ ಚಿತ್ರೀಕರಣ ನಡೆಯುವ ಸ್ಥಳಕ್ಕೆ ಹಾಜರಾಗಬೇಕು ಎಂದು ಕೂಡ ಮೊದಲೇ ಕೇಳಿಕೊಂಡೆ. ಅವರಿಗೆ ನನ್ನ ನಿರೀಕ್ಷೆ ಅರ್ಥವಾಯಿತು. ಎಲ್ಲಕ್ಕೂ ಒಪ್ಪಿದ ಅವರು `ಕುಳ್ಳ ಕುಳ್ಳಿ` ಚಿತ್ರದ ನಾಯಕಿಯಾಗಲು ಒಪ್ಪಿದರು. ಆಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.
avatar
dragon warrior

Posts : 95
Join date : 2012-10-06

Back to top Go down

Re: KK DWARKI ARTICLES

Post by Golden Eagle on Wed Oct 17, 2012 11:54 am

ಮದ್ರಾಸ್‌ಗೆ ಪಯಣ

ನನ್ನ ವಿರುದ್ಧ ಟೀಕೆಗಳಿದ್ದಂತೆಯೇ, ಸಿನಿಮಾ ಮಾಡಲು ಮುಂದಾದಾಗ ವಿತರಕರು ಲಗ್ಗೆ ಇಡುತ್ತಿದ್ದ ಉದಾಹರಣೆಗಳೂ ಇವೆ. ಒಮ್ಮೆ ಎನ್.ಆರ್.ಕಾಲನಿಯ ನಮ್ಮ ಮನೆಗೆ ಯಾರೋ ಒಬ್ಬರು ಬಂದರು. ಅಂಬುಜಾ, `ಮೇಲೆ ಯಾರೋ ನಿಮಗಾಗಿ ಕಾಯುತ್ತಿದ್ದಾರೆ` ಎಂದಳಷ್ಟೇ. ಯಾವುದೋ ಕೆಲಸದಲ್ಲಿ ಮುಳುಗಿದ್ದ ನಾನು, ಅದು ಮುಗಿದ ಮೇಲೆ ಮೇಲೆ ಕುಳಿತಿದ್ದ ವ್ಯಕ್ತಿಯ ವಿಚಾರವನ್ನೇ ಮರೆತೆ. ಕಾರಿನಲ್ಲಿ ಕಂಠೀರವ ಸ್ಟುಡಿಯೋಗೆ ಹೊರಟುಬಿಟ್ಟೆ.

ಆಮೇಲೆ ಅವರಿಗೆ ವಿಷಯ ತಿಳಿದು, ಆಟೊ ಮಾಡಿಕೊಂಡು ನಾನಿದ್ದಲ್ಲಿಗೆ ಬಂದರು. ಕೈಯಲ್ಲಿ ಬ್ರೀಫ್‌ಕೇಸ್ ಇತ್ತು. ನಾನು ಸಿದ್ಧಪಡಿಸುತ್ತಿದ್ದ ಚಿತ್ರದ ವಿತರಣೆಗೆಂದು ಐದು ಲಕ್ಷ ರೂಪಾಯಿ ಕೊಟ್ಟರು. ಆ ಕಾಲದಲ್ಲಿ ನಿಂತಲ್ಲಿಯೇ ವಿತರಣೆ ಬಯಸಿ ಹಣ ನೀಡುತ್ತಿದ್ದವರನ್ನು ನೆನಪಿಸಿಕೊಂಡರೆ ಈಗ ಅಚ್ಚರಿಯಾಗುತ್ತದೆ. ನಮ್ಮ ಸಿನಿಮಾಗಳಿಗೆ ಆ ಪರಿಯ ಬೇಡಿಕೆ ಇತ್ತು.

ಕೆ.ಆರ್.ಜೀ ಎಂಬ ತಮಿಳಿನ ಹೆಸರಾಂತ ನಿರ್ಮಾಪಕರು `ವಂಶಜ್ಯೋತಿ` ಎಂಬ ಚಿತ್ರ ತೆಗೆಯುತ್ತಿದ್ದರು. ಕಾರಣಾಂತರಗಳಿಂದ ಅದರ ಚಿತ್ರೀಕರಣ ಅರ್ಧಕ್ಕೇ ನಿಂತುಹೋಗಿತ್ತು.

ಅವರು ನನ್ನ ಮನೆಗೆ ಬಂದು ಸಹಾಯ ಕೇಳಿದರು. ಕಲ್ಪನಾ, ವಿಷ್ಣುವರ್ಧನ್ ಸೇರಿದಂತೆ ಪ್ರಮುಖ ನಟ-ನಟಿಯರು ಅದರಲ್ಲಿ ಅಭಿನಯಿಸಿದ್ದರು. ಎ.ಭೀಮಸಿಂಗ್ ಚಿತ್ರದ ನಿರ್ದೇಶಕರು. ಅವರೆಲ್ಲರಿಗೆ ನಾನೇ ಫೋನ್ ಮಾಡಿದೆ.

ಸಂಭಾವನೆಯನ್ನು ಅರ್ಧದಷ್ಟು ಕಡಿಮೆ ಮಾಡಿಕೊಳ್ಳುವಂತೆ ವಿನಂತಿಸಿಕೊಂಡೆ. ಅವರೆಲ್ಲಾ ಒಪ್ಪಿದರು. ಮಾಂಡ್ರೆಯವರಿಗೆ ಫೋನ್ ಮಾಡಿ, ಸಿನಿಮಾ ವಿತರಣೆ ಮಾಡುವಂತೆ ಮನವೊಲಿಸಿದೆ. ಕೇವಲ ಒಂದು ಗಂಟೆಯಲ್ಲಿ ಆ ಸಮಸ್ಯೆ ಬಗೆಹರಿಯಿತು.

ಕೆ.ಆರ್.ಜೀ ಅವರಿಗೆ ಖುಷಿಯಾಯಿತು. ಒಂದು ತಿಂಗಳಲ್ಲೇ ಬಾಕಿ ಇದ್ದ ದೃಶ್ಯಗಳ ಚಿತ್ರೀಕರಣ ಮುಗಿದು, ಚಿತ್ರ ತೆರೆಕಂಡಿತು. ಬೆಂಗಳೂರಿನ ಡ್ರೈವ್-ಇನ್ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಚಿತ್ರ `ವಂಶಜ್ಯೋತಿ`. ಅದು ಚೆನ್ನಾಗಿಯೇ ಓಡಿತು. ಕಲೆಕ್ಷನ್ ಕೂಡ ಉತ್ತಮವಾಗಿತ್ತು.

*
ದೊಡ್ಡ ದೊಡ್ಡ ನಟರ ಜೊತೆ ಅಭಿನಯಿಸಿದ್ದ ನಾಯಕಿ ಉದಯಚಂದ್ರಿಕಾ ಒಮ್ಮೆ ನಮ್ಮ ಮನೆಗೆ ಬಂದರು. ತಮಗೆ ಅವಕಾಶಗಳೇ ಇಲ್ಲವಾಗಿದೆ ಎಂದು ನೊಂದುಕೊಂಡು, ಪಾತ್ರವೊಂದನ್ನು ನೀಡುವಂತೆ ಕೇಳಿಕೊಂಡರು. ಬಣ್ಣ ಹಚ್ಚಿ ಮೆರೆದ ಸುಂದರ ವದನದ ನಾಯಕಿಗೆ ಅಂಥ ಕಷ್ಟ ಬಂದಿತಲ್ಲ ಎಂದು ನನಗೆ ಸಂಕಟವಾಯಿತು. ವಿಷ್ಣುವರ್ಧನ್‌ಗೆ ತಕ್ಷಣ ಫೋನ್ ಮಾಡಿದೆ.

`ಉದಯಚಂದ್ರಿಕಾ ಪರಿಸ್ಥಿತಿಯನ್ನು ವಿವರಿಸಿ, ಅವರಿಗಾಗಿಯೇ ಒಂದು ಸಿನಿಮಾ ಮಾಡೋಣ ಎಂದುಕೊಂಡಿದ್ದೇನೆ. ನೀನೇ ಅದರ ನಾಯಕ` ಎಂದೆ. ಆಗೀಗ ಜಗಳವಾಡಿಕೊಳ್ಳುತ್ತಾ ಇದ್ದರೂ ವಿಷ್ಣು, ನಾನು ಮತ್ತೆ ಒಂದಾಗುತ್ತಿದ್ದ ಕಾಲವದು.

ನನ್ನ ಮಾತಿಗೆ ಆಗ ವಿಷ್ಣು ಎರಡನೆ ಮಾತೇ ಆಡುತ್ತಿರಲಿಲ್ಲ. `ನೀನು ಹೇಳಿದ ಮೇಲೆ ಮುಗಿಯಿತು` ಎಂದು ಒಪ್ಪಿದ. ಅಂಜತಾ ರಾಜು ಎಂಬ ವಿತರಕರಿಗೆ ಫೋನ್ ಮಾಡಿ ಒಂದಿಷ್ಟು ಹಣಕಾಸಿನ ಸಹಾಯ ಮಾಡುವಂತೆ ಕೇಳಿದೆ.

ನಾಲ್ಕು ಲಕ್ಷ ರೂಪಾಯಿಯನ್ನು ಅವರು ತಕ್ಷಣವೇ ಒದಗಿಸಲು ಮುಂದಾದರು. ನಿರ್ದೇಶಕನ ಸೀಟಿನ ಮೇಲೆ ಮತ್ತೆ ಭಾರ್ಗವನನ್ನೇ ಕೂರಿಸಿದೆ. `ಅಸಾಧ್ಯ ಅಳಿಯ` ಸಿನಿಮಾ ಆದದ್ದು ಹೀಗೆ. ಕಷ್ಟದಲ್ಲಿದ್ದ ಉದಯಚಂದ್ರಿಕಾ ಅವರಿಗಾಗಿಯೇ ವಿಷ್ಣು ಕಾಲ್‌ಷೀಟ್ ಕೊಡಿಸಿದೆ.

ಆ ಸಿನಿಮಾ ಕೂಡ ಚೆನ್ನಾಗಿ ಓಡಿತು. ಇವನ್ನೆಲ್ಲಾ ನೆನಪಿಸಿಕೊಂಡಾಗ, ಚಿಟಿಕೆ ಹೊಡೆದಷ್ಟೇ ಸುಲಭವಾಗಿ ಆಗ ಕೆಲಸಗಳು ಆಗುತ್ತಿದ್ದವಲ್ಲ ಎನಿಸುತ್ತದೆ. ಈಗ ಪರಿಸ್ಥಿತಿ ಹಾಗಿಲ್ಲ.
*
ಬೆಂಗಳೂರಿನ ಅಲಂಕಾರ್ ಚಿತ್ರಮಂದಿರದ ಮಾಲೀಕ ಕೆ.ಸಿ.ದೇಸಾಯ್ ಅವರ `ಅಮ್ಮಿ ಫಿಲ್ಮ್ಸ್` ಎಂಬ ಸಂಸ್ಥೆಯಿತ್ತು. ಅದರಲ್ಲಿದ್ದ ನಾಗರಾಜ್ ರಾವ್ ಎಂಬುವರು ಒಂದು ಸಿನಿಮಾ ಮಾಡಿಕೊಡಿ ಎಂದು ಪದೇಪದೇ ಕೇಳುತ್ತಿದ್ದರು. ಅದೇ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕ್‌ನ ಎನ್.ಆರ್.ಕಾಲನಿ ಶಾಖೆಯ ವ್ಯವಸ್ಥಾಪಕರು ನನ್ನ ಮನೆಗೆ ಬಂದರು. ಅದು ವರ್ಷಾಂತ್ಯ.

ಹತ್ತು ಹದಿನೈದು ಲಕ್ಷ ರೂಪಾಯಿ ಠೇವಣಿ ಇಡುವಂತೆ ಅವರು ನನ್ನಲ್ಲಿ ಮನವಿ ಮಾಡಿಕೊಂಡರು. ತಕ್ಷಣ ನಾನು ನಾಗರಾಜ್ ರಾವ್ ಅವರಿಗೆ ಫೋನ್ ಮಾಡಿದೆ. ಒಂದೇ ತಾಸಿನಲ್ಲಿ ಆಟೊದಲ್ಲಿ ಬಂದು ಅವರು ಹತ್ತು ಲಕ್ಷ ರೂಪಾಯಿ ಠೇವಣಿಯನ್ನು ಬ್ಯಾಂಕ್‌ಗೆ ಕಟ್ಟಿದರು.

ಮೂರು ತಿಂಗಳುಗಳ ನಂತರ ಆ ಹಣವನ್ನು ವಾಪಸ್ ಪಡೆಯುವಂತೆ ನಾನು ಕೇಳಿಕೊಂಡಾಗ ಅವರು, `ಸಿನಿಮಾ ಮಾಡಿಕೊಡಲೆಂದು ಆ ಹಣ ಕೊಟ್ಟಿರುವುದೇ ವಿನಾ ಸಾಲವಾಗಿ ಅಲ್ಲ` ಎಂದರು. ಆಗ ನನ್ನ ಚಿತ್ರಗಳಿಗೆ ಅಷ್ಟು ಬೆಲೆಯಿತ್ತು.
*
`ನ್ಯಾಯ ಎಲ್ಲಿದೆ` ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ನನಗೆ ಕಾಟ ಕೊಡುವವರ ಆವುಟ ಜಾಸ್ತಿಯಾಯಿತು. ನನ್ನ ಮನೆಗೆ ಕಲ್ಲು ತೂರಿದರು. ಅಡುಗೆಯವನ ಮೇಲೆ ಹಲ್ಲೆ ಮಾಡಿದರು.

ಮನಸ್ಸಿಗೆ ನೋವಾಯಿತು. ನನ್ನ ನಿರ್ಮಾಣ ಸಂಸ್ಥೆಯ `ಎಂಬ್ಲಂ`ನಲ್ಲೇ ಕರ್ನಾಟಕದ ನಕಾಶೆ ಇದೆ. ಈ ಮಣ್ಣನ್ನು ನಂಬಿದವ ನಾನು. `ಕನ್ನಡನಾಡು ಬಲು ಚೆನ್ನ, ಅಲ್ಲಿಗೆ ಹೋಗೋಣ ಬಾ` ಎಂದು ಸಿಂಗಪೂರ್‌ನಲ್ಲಿ ಹಾಡು ಬರೆಸಿದ್ದವನು. ಹಾಗಿರುವಾಗ ನನ್ನ ಮಕ್ಕಳನ್ನು ಅಪಹರಿಸುವುದಾಗಿ ಬೆದರಿಕೆ ಹಾಕತೊಡಗಿದರು. ಒಬ್ಬ ಕಲಾವಿದ ಗೆದ್ದರೆ ಎಷ್ಟೊಂದು ತೊಂದರೆ ಎಂದು ನನಗೆ ಅನ್ನಿಸಿದ್ದೇ ಆಗ.

ಆ ಕಷ್ಟಕೋಟಲೆಗಳ ನಡುವೆಯೂ `ನ್ಯಾಯ ಎಲ್ಲಿದೆ` ಚಿತ್ರವನ್ನು ಮಾಡಿ ಮುಗಿಸಿದೆವು. ಆ ಚಿತ್ರಕ್ಕೆ ಶಂಕರ್‌ನಾಗ್ ನಾಯಕ. ಆಗ ಶಂಕರ್‌ನಾಗ್ ಬೇಡಿಕೆ ಕುಸಿದಿತ್ತು. ಮುಂಗಡ ಹಣ ನೀಡಿದ್ದ ಎಷ್ಟೋ ಜನ ಅವರ ಬಳಿ ಹೋಗಿ, `ನೀವು ನಟಿಸುವುದು ಬೇಡ, ನಿರ್ದೇಶನ ಮಾಡಿಕೊಡಿ` ಎಂದು ಮಾತು ಬದಲಿಸತೊಡಗಿದ್ದರು.

ಆ ಕಾಲಘಟ್ಟದಲ್ಲಿ ಶಂಕರ್‌ನಾಗ್‌ಗೆ ಒಂದು ಬ್ರೇಕ್ ಕೊಡಲೇಬೇಕು ಎಂದು ಅನ್ನಿಸಿದ್ದರಿಂದ `ನ್ಯಾಯ ಎಲ್ಲಿದೆ` ಚಿತ್ರದ ನಾಯಕನಾಗಿ ಅವನನ್ನು ಆಯ್ಕೆ ಮಾಡಿದೆ. ಹಿಂದೆ ಅವನ ಜೊತೆ ನಟಿಸಿದ್ದ ನಾಯಕಿಯರೇ ಬೇಡ ಎನ್ನಿಸಿ, ಆರತಿಯನ್ನು ನಾಯಕಿಯಾಗಿ ಮಾಡಿದೆ. ಆ ಚಿತ್ರ ಸೂಪರ್ ಡೂಪರ್ ಹಿಟ್. 25 ವಾರ ಓಡಿತು.

ಒಂದು ಕಡೆ ಯಶಸ್ಸು, ಇನ್ನೊಂದು ಕಡೆ ಕಷ್ಟ. ನನ್ನ ಮನಸ್ಸಿನಲ್ಲಿ ತಳಮಳ ಶುರುವಾಯಿತು. ಬೆಂಗಳೂರಿನಲ್ಲಿ ಇರುವುದು ಸಾಧ್ಯವೇ ಇಲ್ಲ ಎಂಬಂಥ ವಾತಾವರಣ ಸೃಷ್ಟಿಯಾಯಿತು. ನಮ್ಮ ವೇದಪ್ರದಾ ಪಿಕ್ಚರ್ಸ್‌ ಕಚೇರಿಗೂ ದುಷ್ಕರ್ಮಿಗಳು ಕಲ್ಲು ತೂರಿದರು. ಪ್ರಭಾಕರ್ ರೆಡ್ಡಿಗೂ ಕಲ್ಲೇಟು ಬಿತ್ತು. ನನಗೆ ಇನ್ನು ಇಲ್ಲಿ ಇರುವುದರಲ್ಲಿ ಅರ್ಥವೇ ಇಲ್ಲವೆನ್ನಿಸಿತು. ಮದ್ರಾಸ್‌ಗೆ ಹೊರಡಲು ತೀರ್ಮಾನಿಸಿದೆ.

ಕಟ್ಟಿಕೊಂಡಿದ್ದ ಕನಸುಗಳೆಲ್ಲಾ ಆಗ ಕಾಡತೊಡಗಿದವು. ಪ್ಯಾಲೇಸ್ ಆರ್ಚಡ್‌ನಲ್ಲೊಂದು ಮನೆ ಕೊಂಡಿದ್ದ ನಾನು ಮುಂದೆ ನನ್ನದೇ ಒಂದು ಸ್ಟುಡಿಯೋ ಕಟ್ಟುವ ಆಸೆ ಇಟ್ಟುಕೊಂಡಿದ್ದೆ. ಆಮೇಲೆ ಆ ಮನೆಯನ್ನು ಮಾರಿದ್ದು ಬೇರೆ ವಿಚಾರ.

ಚಾಮುಂಡೇಶ್ವರಿ ಸ್ಟುಡಿಯೋ ಮಾಲೀಕ ಕುಪ್ಪಸ್ವಾಮಿ, ಕಂಠೀರವ ಸ್ಟುಡಿಯೋ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕರಿಬಸವಯ್ಯ ಮೊದಲಾದವರು ಬೆಂಗಳೂರು ಬಿಟ್ಟು ಹೋಗಬೇಡ ಎಂದು ಗಂಟೆಗಟ್ಟಲೆ ನನ್ನ ಮನವೊಲಿಸಲು ಯತ್ನಿಸಿದರು. ಮಾಂಡ್ರೆ ಅವರಿಗೂ ನಾನು ನಗರ ಬಿಡುವುದು ಇಷ್ಟವಿರಲಿಲ್ಲ. ಆದರೆ, ನಿರಂತರ ಉಪಟಳಗಳಿಂದ ಸಾಕಷ್ಟು ಕುಸಿದುಹೋಗಿದ್ದ ನನಗೆ ಮದ್ರಾಸ್‌ಗೆ ಹೋಗದೇ ಬೇರೆ ವಿಧಿಯೇ ಇರಲಿಲ್ಲ.

1982ರ ಏಪ್ರಿಲ್‌ನಲ್ಲಿ ಮದ್ರಾಸ್ ಕಾರ್‌ನಲ್ಲೇ ನನ್ನ ಹೆಂಡತಿ ಮಕ್ಕಳ ಸಮೇತ ಮದ್ರಾಸ್‌ಗೆ ಹೊರಟೆ. ಅಲ್ಲಿ ನಾವು ಹೋದಾಗ ನೆಲೆ ಇರಲಿಲ್ಲ. ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ಒಂದು ಕಾಟೇಜನ್ನು ಬಾಡಿಗೆಗೆ ಪಡೆದೆ. ಸಿನಿಮಾ ಧ್ಯಾನದಲ್ಲೇ ಇದ್ದ ನನ್ನನ್ನು ದುಷ್ಕರ್ಮಿಗಳು ನಿಜಕ್ಕೂ ಕರ್ನಾಟಕ ಬಿಟ್ಟು ಓಡಿಹೋಗುವಂತೆ ಮಾಡಿದ್ದರು. ಆರು ತಿಂಗಳು ನಾನು ಆ ಕಾಟೇಜ್‌ನಲ್ಲೇ ಸಂಸಾರ ನಡೆಸಿದೆ.
avatar
Golden Eagle

Posts : 1351
Join date : 2012-08-10

Back to top Go down

Re: KK DWARKI ARTICLES

Post by Sponsored content


Sponsored content


Back to top Go down

Back to top


 
Permissions in this forum:
You cannot reply to topics in this forum