ಚಂದನವನ (sandalwood)


Join the forum, it's quick and easy

ಚಂದನವನ (sandalwood)
ಚಂದನವನ (sandalwood)
Would you like to react to this message? Create an account in a few clicks or log in to continue.

ಇದೀಗ ಯಡಿಯೂರಪ್ಪ ಅವರಿಗೆ ರಸ್ತೆಯ ಕೊನೆ!

Go down

ಇದೀಗ ಯಡಿಯೂರಪ್ಪ ಅವರಿಗೆ ರಸ್ತೆಯ ಕೊನೆ! Empty ಇದೀಗ ಯಡಿಯೂರಪ್ಪ ಅವರಿಗೆ ರಸ್ತೆಯ ಕೊನೆ!

Post by Admin Mon Oct 01, 2012 3:04 pm

ಇದೀಗ ಯಡಿಯೂರಪ್ಪ ಅವರಿಗೆ ರಸ್ತೆಯ ಕೊನೆ! 2012-09-29~Yeddi-for-edit_ns

ಪ್ರೇಮ ಅಥವಾ ಕದನಕ್ಕೆ ಇಬ್ಬರು ಬೇಕೇ ಬೇಕು. ಒಬ್ಬರೇ ಮಾಡುವ ಕೆಲಸವಲ್ಲ ಅವು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಗ ತಮ್ಮ ಪಕ್ಷದ ಜತೆಗೆ ಪ್ರೇಮ ಮಾಡುವ ಕಾಲ ಮುಗಿದಿದೆ! ಕದನ ಮಾಡಬೇಕು ಎಂದು ಅವರು ಎಷ್ಟು ಕಾಲು ಕೆದರಿ ನಿಂತರೂ ಅದಕ್ಕೂ ಆ ಕಡೆಯಿಂದ ಯಾವ ಪ್ರತಿಕ್ರಿಯೆಯೂ ಬರುತ್ತಿಲ್ಲ. ಹೇಗೂ ಅವರು ಹೊರಗೆ ಹೋಗಲು ನಿರ್ಧರಿಸಿದ್ದಾರೆ. ತಾವಾಗಿಯೇ ತಿಳಿದಾಗ ಹೋಗಲಿ ಎಂದು ಪಕ್ಷ ತೀರ್ಮಾನಿಸಿದಂತೆ ಕಾಣುತ್ತದೆ.

ಆದರೆ, ಹೇಗಾದರೂ ಮಾಡಿ ಕದನ ಮಾಡಬೇಕು, ಪಕ್ಷದ ನಾಯಕರನ್ನು ಕೆರಳಿಸಬೇಕು ಎಂದುಕೊಂಡಿರುವ ಯಡಿಯೂರಪ್ಪ ಅವರಿಗೆ ಇದರಿಂದ ನಿರಾಶೆ ಆಗಿದೆ. ಅವರಿಗೆ ಏನು ಬೇಕಾಗಿದೆ ಎಂದು ಪಕ್ಷಕ್ಕೆ ಗೊತ್ತಿದ್ದಂತೆ ಇಲ್ಲ.

ಏಕೆಂದರೆ ಪಕ್ಷದ ಅಧ್ಯಕ್ಷ ಹುದ್ದೆ ಕೊಟ್ಟರೂ ಬೇಡ ಎಂದು ಯಡಿಯೂರಪ್ಪನವರೇ ಬಹಿರಂಗವಾಗಿ ಹೇಳಿಬಿಟ್ಟಿದ್ದಾರೆ. ಮುಖ್ಯಮಂತ್ರಿ ಮಾಡಬೇಕು ಎಂದರೆ ಅವರೇ ಸೂಚಿಸಿದ ಜಗದೀಶ ಶೆಟ್ಟರ್ ಆ ಕುರ್ಚಿಯಲ್ಲಿ ಕುಳಿತಿದ್ದಾರೆ. ಮುಂಚೆ ಕೂಡ ಡಿ.ವಿ.ಸದಾನಂದಗೌಡರನ್ನು ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರೇ ಹೆಸರಿಸಿದ್ದರು ಮತ್ತು ಅವರ ಗೆಲುವಿಗೆ ಶ್ರಮಿಸಿದ್ದರು.

ಅವರಿಗೂ ಇವರಿಗೂ ಹಳಸಿತು. ಅವರನ್ನು ತೆಗೆಯಬೇಕು ಎಂದರು. ಆಯ್ತು ಪಕ್ಷ ಒಪ್ಪಿತು. ಸದಾನಂದಗೌಡರ ಜಾಗದಲ್ಲಿ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದ ಮೇಲೆ ಅವರ ಸಂಪುಟದಲ್ಲಿ ತಮ್ಮ ಬಣದಿಂದ ಯಾರ‌್ಯಾರು ಮಂತ್ರಿಗಳಾಗಬೇಕು ಎಂದು ಯಡಿಯೂರಪ್ಪ ಬಯಸಿದರೋ ಅವರನ್ನೇ ಮಂತ್ರಿ ಮಾಡಲಾಯಿತು.

ಅವರು ಕೇಳಿದ ಖಾತೆಗಳನ್ನೇ ಕೊಡಲಾಯಿತು. ಇಲ್ಲವಾದರೆ ನಿನ್ನೆ ಮೊನ್ನೆ ಪಕ್ಷಕ್ಕೆ ಬಂದಿದ್ದ ಬಿ.ಜೆ.ಪುಟ್ಟಸ್ವಾಮಿ ಒಂದೇ ಸಾರಿ ವಿಧಾನಪರಿಷತ್ತಿಗೂ ಚುನಾಯಿತರಾಗಿ ಹಿಂದೆಯೇ ಸಹಕಾರ ಖಾತೆಯ ಸಚಿವರೂ ಆಗಬೇಕಾಗಿರಲಿಲ್ಲ. ಯಡಿಯೂರಪ್ಪ ಪರ ಇದ್ದವರಿಗೇ ಪುಟ್ಟಸ್ವಾಮಿಯವರಿಗೆ ಒಲಿದ ಅದೃಷ್ಟ ದಿಗ್ಭ್ರಮೆ ಮೂಡಿಸಿತ್ತು. ಈಗಲೂ ಸರ್ಕಾರದ ಅನೇಕ ನಿಗಮ ಮಂಡಳಿಗಳ ಅಧ್ಯಕ್ಷ ಹುದ್ದೆಗಳಲ್ಲಿ ಯಡಿಯೂರಪ್ಪ ಬೆಂಬಲಿಗರೇ ಇದ್ದಾರೆ.

ಅವರ ರಾಜೀನಾಮೆ ಪಡೆದು ಬೇರೆಯವರಿಗೆ ಅವಕಾಶ ಕೊಡಬೇಕು ಎಂದು ಮುಖ್ಯಮಂತ್ರಿಗಳಿಗೆ ಆಸೆ ಇದ್ದರೂ ಅದು ಕೈಗೂಡುವ ಲಕ್ಷಣಗಳು ಇಲ್ಲ. ಏಕೆಂದರೆ ತಮ್ಮ ಬೆಂಬಲಿಗರ ಹಿತಕ್ಕೆ ಧಕ್ಕೆ ಬರುವ ಯಾವ ತೀರ್ಮಾನ ತೆಗೆದುಕೊಳ್ಳಲೂ ಯಡಿಯೂರಪ್ಪ ಬಿಡುವುದಿಲ್ಲ.

ಶೆಟ್ಟರ್ ಸಂಪುಟದಲ್ಲಿ ಇರುವ ಸದಾನಂದಗೌಡರ ಬೆಂಬಲಿಗರಿಗೆ ಉತ್ತಮ ಖಾತೆಗಳು ಬೇಕಾಗಿವೆ. ಉಪಮುಖ್ಯಮಂತ್ರಿ ಸ್ಥಾನಕ್ಕೇ ಹೆಸರು ಕೇಳಿಬಂದಿದ್ದ ಗೋವಿಂದ ಕಾರಜೋಳರಿಗೆ ಇನ್ನಷ್ಟು ಒಳ್ಳೆಯ ಖಾತೆ ಕೊಡಬೇಕು ಎಂಬ ಮಾತುಕತೆ ಆಗಿದ್ದರೂ ಅದನ್ನು ಈಡೇರಿಸಲು ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ. ಕಾರಜೋಳರ ಜತೆಗೆ ಬಾಲಚಂದ್ರ ಜಾರಕಿಹೊಳಿ ಅವರಿಗೂ ಇನ್ನಷ್ಟು ಉತ್ತಮ ಖಾತೆ ಕೊಡುವ ಭರವಸೆ ಪಕ್ಷದಿಂದ ಸಿಕ್ಕಿತ್ತು.

ಆದರೆ, ಇದಕ್ಕೆ ಪ್ರತಿಯಾಗಿ ಯಡಿಯೂರಪ್ಪನವರು ರೇಣುಕಾಚಾರ್ಯ ಮತ್ತು ರಾಜುಗೌಡ ಅವರಿಗೆ ಇನ್ನಷ್ಟು ಒಳ್ಳೆಯ ಖಾತೆ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಉದಾಸಿ, ಬೊಮ್ಮಾಯಿ, ಕತ್ತಿ, ಸೋಮಣ್ಣ ಅವರನ್ನೆಲ್ಲ ಬಿಟ್ಟು ರೇಣುಕಾಚಾರ್ಯರ ಮೇಲಿನ ಪ್ರೀತಿಗೆ ಏನು ಕಾರಣ ಎಂದು ಗೊತ್ತಾಗುವುದಿಲ್ಲ.

ರಾಜುಗೌಡರ ಮೇಲೂ ಅಂಥ ಪ್ರೀತಿಯೇನೂ ಇದ್ದಂತೆ ಕಾಣುವುದಿಲ್ಲ. ನಾಯಕ ಸಮುದಾಯಕ್ಕೆ ಸೇರಿದ ಜಾರಕಿಹೊಳಿ ಅವರಿಗೆ ಉತ್ತಮ ಖಾತೆ ಕೊಡುವುದಾದರೆ ಅದೇ ಸಮುದಾಯಕ್ಕೆ ಸೇರಿದ ರಾಜುಗೌಡರಿಗೂ ಕೊಡಿ ಎಂದು ಯಡಿಯೂರಪ್ಪ ಪಟ್ಟು ಹಾಕಿದ್ದಾರೆ.

ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಅವರ ಬೆಂಬಲಕ್ಕೆ ನಿಂತಿದ್ದ ಜಾರಕಿಹೊಳಿ ಅವರಿಗೆ ಒಳ್ಳೆಯ ಖಾತೆ ಸಿಗುವ ಅವಕಾಶ ತಪ್ಪಿಸಬೇಕಾದರೆ ಅವರ ಸಮುದಾಯಕ್ಕೆ ಸೇರಿದ ಇನ್ನೊಬ್ಬ ವ್ಯಕ್ತಿಯ ಬೆಂಬಲಕ್ಕೆ ನಿಂತು ಬಿಟ್ಟರೆ ಆಯಿತಲ್ಲ!

ಜಾರಕಿಹೊಳಿ ಅವರಿಗೆ ಯಡಿಯೂರಪ್ಪ ಪಾಠ ಕಲಿಸುತ್ತಿರುವ ರೀತಿ ಇದು.
ಯಡಿಯೂರಪ್ಪ ಅವರಿಗೆ ಪಕ್ಷದಿಂದ ಏನು ಬೇಕಾಗಿದೆ? ಅನುಮಾನವೇನೂ ಬೇಡ. ಮುಖ್ಯಮಂತ್ರಿ ಗಾದಿಯೇ ಬೇಕಾಗಿದೆ.

ಆದರೆ, ಅದು ಸಿಗುವುದಿಲ್ಲ. ಹಾಗಾದರೆ ಮತ್ತೇನು ಬೇಕು? ಮತ್ತೆ ಅನುಮಾನ ಬೇಡ. ಪಕ್ಷದ ಅಧ್ಯಕ್ಷ ಗಾದಿ ಬೇಕು. ಅದೂ ಸಿಗುವಂತೆ ಕಾಣುವುದಿಲ್ಲ. ಹಿಂದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಯಡಿಯೂರಪ್ಪ ನಡುವೆ ಏನು ಮಾತುಕತೆ ಆಗಿತ್ತೋ ಏನೋ ಗೊತ್ತಿಲ್ಲ.

ಪಕ್ಷದ ರಾಷ್ಟ್ರೀಯ ನಾಯಕರ ಯೋಚನಾ ಸರಣಿ ನೋಡಿದರೆ ಅವರು ರಾಜ್ಯ ಅಧ್ಯಕ್ಷತೆ ಹುದ್ದೆಯನ್ನೂ ಯಡಿಯೂರಪ್ಪ ಅವರಿಗೆ ಕೊಡುವಂತೆ ಕಾಣುವುದಿಲ್ಲ. ಅದಕ್ಕೆ ಅವರದೇ ಆದ ಕಾರಣಗಳು ಇರಬಹುದು. ಅಧ್ಯಕ್ಷ ಹುದ್ದೆ ತಮಗೆ ಸಿಗದೇ ಇದ್ದರೆ ತಾವು ಪಕ್ಷದಲ್ಲಿ ಇರುವುದಕ್ಕೆ ಅರ್ಥವಿಲ್ಲ ಎಂದು ಯಡಿಯೂರಪ್ಪ ಅವರಿಗೆ ಸ್ಪಷ್ಟವಾಗಿ ಅನಿಸಿದೆ.

ಚುನಾವಣೆ ವರ್ಷದಲ್ಲಿ ಅಧ್ಯಕ್ಷರಿಗೆ ಪಕ್ಷದ ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವ ಅಧಿಕಾರ ಇರುತ್ತದೆ. ತಮಗೆ ಬೇಕಾದವರಿಗೆ ಟಿಕೆಟ್ ಕೊಟ್ಟು ಮುಂದೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಆಗುವಾಗ ಅವರು ತನ್ನ ಬೆಂಬಲಕ್ಕೆ ನಿಲ್ಲುವಂತೆ ಮಾಡಬಹುದು. ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟ ಯಾವ ನಾಯಕನಾದರೂ ಹೀಗೆಯೇ ಯೋಚನೆ ಮಾಡುತ್ತಾನೆ.

ಈಗ ತಮ್ಮನ್ನು ಅಧ್ಯಕ್ಷ ಮಾಡುವುದಿಲ್ಲ ಎನ್ನುವುದಾದರೆ ಇನ್ನಾರನ್ನೋ ಮುಖ್ಯಮಂತ್ರಿ ಮಾಡಲು ಯಡಿಯೂರಪ್ಪ ಏಕೆ ರಾಜ್ಯ ಸುತ್ತಬೇಕು? ಪ್ರಚಾರ ಮಾಡಬೇಕು? ಯಡಿಯೂರಪ್ಪನವರು ಖಾಸಗಿಯಾಗಿ ಆಡುತ್ತಿರುವ ಮಾತು ಇದೇ? ತಾವು ಪಕ್ಷದಲ್ಲಿ ಯಾವ `ಪುರುಷಾರ್ಥಕ್ಕಾಗಿ` ಇರಬೇಕು ಎಂದು.

ಹಾಗೆಂದು ಅವರು ಪಕ್ಷ ಬಿಟ್ಟು ಹೊರಟು ಹೋಗಲೂ ಸಿದ್ಧರಿದ್ದಂತೆ ಇಲ್ಲ. ಆತ ಚಾಣಾಕ್ಷ ರಾಜಕಾರಣಿ. ಸರಿ, ಕಿರಿಕಿರಿ ಆರಂಭಿಸಿದರು. ಅತ್ತ ರಾಷ್ಟ್ರೀಯ ಕಾರ್ಯಕಾರಿಣಿ ಸೇರುತ್ತದೆ; ಅಲ್ಲಿ ರಾಜ್ಯ ಪಕ್ಷದ ಅಧ್ಯಕ್ಷ ಹುದ್ದೆಗೆ ಚರ್ಚೆ ನಡೆಯಬಹುದು ಎಂದು ಗೊತ್ತಾಗುತ್ತಿದ್ದಂತೆಯೇ ಇತ್ತ ಯಡಿಯೂರಪ್ಪ ಸೆಟಗೊಂಡರು. ಪಕ್ಷದ ನಾಯಕರ ವಿರುದ್ಧ ಟೀಕಾಪ್ರಹಾರ ಮಾಡಿದರು.

ಕಳೆದ ಮೇನಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಗೆ ಹೋಗುವುದಿಲ್ಲ ಎಂದು ಘೋಷಣೆ ಮಾಡಿದ ಹಾಗೆಯೇ ಈಗಲೂ ಮಾಡಿದರು. ಆದರೆ, ಒಂದೇ ಅಸ್ತ್ರವನ್ನು ಮತ್ತೆ ಮತ್ತೆ ಬಳಸಬಾರದು ಎಂದು ಅವರಿಗೆ ಗೊತ್ತಾಗಲಿಲ್ಲ. ಕಳೆದ ಸಾರಿ ಪಕ್ಷದ ನಾಯಕರು ಇವರಿಗೆ ಕಾರ್ಯಕಾರಿಣಿಗೆ ಬಂದು ಹಾಜರಾಗಿ ಎಂದು ಕರೆ ಮಾಡಿದರು.

ಈ ಸಾರಿ ಉದಾಸೀನ ಮಾಡಿದರು. ಕದನ ಕುತೂಹಲಿ ಯಡಿಯೂರಪ್ಪ ಅವರಿಗೆ ಮತ್ತೆ ನಿರಾಶೆಯಾಯಿತು. ಮುಂದೆಯೂ ಅವರಿಗೆ ಪಕ್ಷ ತಮ್ಮನ್ನು ಮತ್ತೆ ಮತ್ತೆ ಅವಮಾನಿಸುತ್ತದೆ ಎಂದು ಅನಿಸಬಹುದು.

ಆದರೂ ಅವರು ತಾವಾಗಿಯೇ ಪಕ್ಷ ಬಿಡುವಂತೆ ಕಾಣುವುದಿಲ್ಲ. ಪಕ್ಷವೇ ತಮ್ಮನ್ನು ಹೊರಗೆ ಹಾಕಲಿ ಎಂದು ಅವರು ಬಯಸುತ್ತಿದ್ದಾರೆ. ಶುಕ್ರವಾರ ದಿಢೀರ್ ಎಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ತಾವು 40 ವರ್ಷ ಪಕ್ಷಕ್ಕೆ ದುಡಿದುದನ್ನು ಪ್ರಸ್ತಾಪ ಮಾಡಿದ್ದು ಇದೇ ಕಾರಣದಿಂದ.

40 ವರ್ಷ ದುಡಿದ ಒಬ್ಬ ವ್ಯಕ್ತಿಯನ್ನು ಹೊರಗೆ ಹಾಕಿ ಪಕ್ಷ ಅನ್ಯಾಯ ಮಾಡಿತು ಎಂದು ಜನರು, ಅದರಲ್ಲಿಯೂ ಲಿಂಗಾಯತ ಸಮಾಜ ಭಾವಿಸಲಿ ಎಂಬುದು ಅವರ ಉದ್ದೇಶ. ಪಕ್ಷದಿಂದ ತಾವು ಮುಖ್ಯಮಂತ್ರಿ ಅಥವಾ ಅಧ್ಯಕ್ಷ ಆಗುವ ಕಾಲ ಮುಗಿದು ಹೋಗಿದೆ ಎಂಬ ಮಾತೂ ಅವರ ಬಾಯಿಂದ ಬಂದಿದೆ.

ಇದುವರೆಗೆ ಅವರು ಅಟಲಬಿಹಾರಿ ವಾಜಪೇಯಿ ಅವರನ್ನು ಹೊಗಳುತ್ತಿದ್ದರು. ಅಂದರೆ ಲಾಲ್‌ಕೃಷ್ಣ ಅಡ್ವಾಣಿ ಅವರನ್ನು ಪರೋಕ್ಷವಾಗಿ ದೂಷಿಸುತ್ತಿದ್ದರು. ಈಗ ಅವರು ಹಾಲಿ ಅಧ್ಯಕ್ಷ ನಿತಿನ್ ಗಡ್ಕರಿ ವಿರುದ್ಧವೂ ಪರೋಕ್ಷ ಟೀಕೆ ಮಾಡಿದ್ದಾರೆ.

ಸಾಲದು ಎಂದು ಬಿಜೆಪಿ ಆಜೀವ ಪರ್ಯಂತ ಟೀಕಿಸಿಕೊಂಡು ಬಂದ ಕಾಂಗ್ರೆಸ್‌ನ ದುರಂಧರರನ್ನು ಮತ್ತೆ ಹೊಗಳಿದ್ದಾರೆ. ಅಲ್ಲಿಗೆ, ಯಡಿಯೂರಪ್ಪ ಅವರಿಗೆ ಪಕ್ಷದ ಮೇಲೆ, ಅದರ ನಾಯಕರ ಮೇಲೆ ಯಾವ ಮೋಹವೂ ಉಳಿದಿಲ್ಲ ಎಂದೇ ಅರ್ಥ.

ಇನ್ನು ಏನಿದ್ದರೂ ಪಕ್ಷಕ್ಕೆ ಇರಿಸು ಮುರಿಸು ಮಾಡುವುದಷ್ಟೇ ಯಡಿಯೂರಪ್ಪನವರ ಕೆಲಸ. ಪಕ್ಷದ ರಾಜ್ಯ ನಾಯಕರು ಮತ್ತು ರಾಷ್ಟ್ರೀಯ ನಾಯಕರಿಗೂ ಯಡಿಯೂರಪ್ಪ ಮೇಲೆ ಮೋಹ ಉಳಿದಿಲ್ಲ. ಹೋದರೆ ಯಡಿಯೂರಪ್ಪ ಒಬ್ಬರೇ ಹೋಗುವುದಿಲ್ಲ ಎಂದು ಅವರಿಗೆ ಗೊತ್ತಿದೆ.

ಯಡಿಯೂರಪ್ಪನವರಂಥ ಒಬ್ಬ ಬಲಿಷ್ಠ ನಾಯಕ ಪಕ್ಷ ಬಿಟ್ಟು ಹೋದರೆ ಚುನಾವಣೆ ಫಲಿತಾಂಶ ಏರುಪೇರಾಗಬಹುದು ಎಂದೂ ಅವರಿಗೆ ಗೊತ್ತಿದೆ. ಆದರೆ, ಯಡಿಯೂರಪ್ಪ ಜತೆಗೆ ಆಪರೇಷನ್ ಕಮಲದ ಮೂಲಕ ಬಂದ ಬಹುತೇಕ ನಾಯಕರೆಲ್ಲ ಬಿಜೆಪಿ ಬಿಡಬಹುದು. ಮೂಲ ಬಿಜೆಪಿಯವರು ಮಾತ್ರ ಪಕ್ಷದಲ್ಲಿ ಉಳಿಯಬಹುದು.

ಆ ಮೂಲಕ ಪಕ್ಷವನ್ನು ಸ್ವಚ್ಛಗೊಳಿಸಿದಂತೆಯೂ ಆಗಬಹುದು ಎಂದು ಈ ನಾಯಕರು ಅಂದುಕೊಂಡಿದ್ದಾರೆ. ಈಗ ಹೊರಟಿರುವ ರೀತಿ ನೋಡಿದರೆ ಯಡಿಯೂರಪ್ಪನವರೇ ಮೊದಲು ಸಹನೆ ಕಳೆದುಕೊಳ್ಳಬಹುದು.

ಡಿಸೆಂಬರ್ ವೇಳೆಗೆ ಪಕ್ಷ ಬಿಡಬೇಕು ಎಂದುಕೊಂಡಿರುವ ಅವರು ಅಲ್ಲಿಯ ವರೆಗೆ ಪಕ್ಷಕ್ಕೆ ಬೇಕಾದಷ್ಟು ಕಿರಿಕಿರಿ ಮಾಡಬಹುದು. ಅವರನ್ನು ಪಕ್ಷದಿಂದ ಹೊರಗೆ ಎಳೆದು ತಂದರೆ ಬಿಜೆಪಿ ದುರ್ಬಲವಾಗುತ್ತದೆ ಎಂದು ಚೆನ್ನಾಗಿ ಗೊತ್ತಿರುವ ಕಾಂಗ್ರೆಸ್ ಕೂಡ ಅವರ ಮುಂದೆ ಆಸೆಯ ಹುಲ್ಲು ಕಡ್ಡಿ ಹಿಡಿದು ನಿಂತಿದೆ.

ಪಕ್ಕದ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ನಾರಾಯಣ ರಾಣೆ ಶಿವಸೇನೆ ಬಿಟ್ಟುಬಂದು ಹತ್ತು ವರ್ಷವಾಯಿತು. ಈಗಲೂ ಅಲ್ಲಿನ ಸರ್ಕಾರದಲ್ಲಿ ಅವರು ಕಂದಾಯ ಮಂತ್ರಿಯಾಗಿದ್ದಾರೆ. ಕಾಂಗ್ರೆಸ್ ಮಾಡುವುದೇ ಹಾಗೆ. ಬೋನು ಹಿಡಿದು ಹುಲಿಯನ್ನು ಬಲಿ ಹಾಕಿ ನಂತರ ಅದನ್ನು ಪಳಗಿಸುವುದು ಹೇಗೆ ಎಂದು ಅದಕ್ಕೆ ಗೊತ್ತು.

ಯಡಿಯೂರಪ್ಪ ಅವರನ್ನು ಕಾಂಗ್ರೆಸ್ ಪಕ್ಷ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆಯೇ? ಅವರ ವಿರುದ್ಧ ಕಳೆದ ನಾಲ್ಕು ವರ್ಷ ಹೋರಾಟ ಮಾಡಿದ ರಾಜ್ಯ ಕಾಂಗ್ರೆಸ್ ನಾಯಕರು ಅದಕ್ಕೆ ಒಪ್ಪುತ್ತಾರೆಯೇ?

ರಾಜಕೀಯದಲ್ಲಿ ಕಾಯಂ ಶತ್ರುಗಳೂ ಇಲ್ಲ ಮಿತ್ರರೂ ಇಲ್ಲ ಎಂಬ ಹಳೆಯ ಗಾದೆಗೆ ಎಲ್ಲರೂ ಮೊರೆ ಹೋಗುತ್ತಾರೆಯೇ? ಕರ್ನಾಟಕ ಇನ್ನು ಮುಂದೆ ವಿಚಿತ್ರ `ಪ್ರೇಮ ಪ್ರಕರಣ`ಗಳಿಗೆ ಮತ್ತು `ಕದನ`ಗಳಿಗೆ ಸಾಕ್ಷಿ ಆಗುವಂತೆ ಕಾಣುತ್ತದೆ. ಏನಿದ್ದರೂ ಡಿಸೆಂಬರ್ ನಂತರ ಒಳ್ಳೆಯ ಮನರಂಜನೆ ಕಾಲ!
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

Back to top


 
Permissions in this forum:
You cannot reply to topics in this forum